ಸರಳ ವಿವಾಹದ ಮೂಲಕ ಮಾದರಿಯಾದ ನವಜೋಡಿಗಳು

07/05/2020

ಮಡಿಕೇರಿ ಮೇ 6 : ಹೊಸ್ಕೇರಿ ಗ್ರಾಮದ ನಿವಾಸಿ ಐತ್ತಪ್ಪ ಹಾಗೂ ಗೀತಾ ಅವರ ಪುತ್ರ ಗಣೇಶ್ ಅವರ ವಿವಾಹ ಶ್ರೀಮಂಗಲ ಗ್ರಾಮ ಚೆಟ್ಟಳ್ಳಿ ನಿವಾಸಿ ಗಿರಿಜಾ ಅವರ ಮಗಳು ಮಂಜುನಾಥ್ ಅವರ ಸಂಬಂಧಿ ಸುಜಾತಳೊಂದಿಗೆ ವಧುವಿನ ಸ್ವಗ್ರಹ ಚೆಟ್ಟಳ್ಳಿಯ ಮನೆಯಲ್ಲಿ ಸರಳವಾಗಿ ನಡೆಯಿತು. ಬೆರಳೆಣಿಕಯಷ್ಟು ನೆಂಟರಿಷ್ಟರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿ ವಧು, ವರರನ್ನು ಆಶೀರ್ವದಿಸಿದರು.
ವಿರಾಜಪೇಟೆ ತಾಲೂಕು ತಿತಿಮತಿ ಭದ್ರಗೋಳಿ ನಿವಾಸಿ ಲೋಕನಾಥ್ ಹಾಗೂ ಅನುರಾಧ ಅವರ ಪುತ್ರ ಟಿ.ಎಲ್.ಅಭಿಷೇಕ್ ಇವರ ವಿವಾಹ ಇಂದು ನೆಲ್ಯಹುದಿಕೇರಿ ನಿವಾಸಿ ಕೆ.ಶಶಿ ಮತ್ತು ಸರಸು ಅವರ ಪುತ್ರಿ ಕೆ.ಎಸ್. ಪಾರ್ವತಿ ಅವರೊಂದಿಗೆ ನೆಲ್ಯಹುದಿಕೇರಿಯ ಸತ್ಯನಾರಾಯಣ ದೇವಾಸ್ಥಾನದ ಆವರಣದಲ್ಲಿ ಸರಳವಾಗಿ ನಡೆಯಿತು. ಎರಡು ಕಡೆಯವರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರಳ ವಿವಾಹಕ್ಕೆ ಸಾಕ್ಷಿಯಾದರು.
ಮೇ 10 ರಂದು ಎರಡು ಮತ್ತು 17 ರಂದು ಎರಡು ಮದುವೆ ನಿಶ್ಚಯವಾಗಿದ್ದು, ಇದು ಕೂಡ ಸರಳವಾಗಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.
ಕೊರೋನಾ ಲಾಕ್ ಡೌನ್ ನಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಸರಳ ವಿವಾಹಗಳು ಇತರರಿಗೆ ಮಾದರಿಯಾಗುತ್ತಿದೆ. ದುಂದು ವೆಚ್ಚ ಮಾಡಿ ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವ ಬದಲು ಅದೇ ಹಣದಿಂದ ಮದುವೆ ಮನೆಯವರು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸುವುದು ಸೂಕ್ತವೆಂದು ರವಿ ಅಭಿಪ್ರಾಯಪಟ್ಟಿದ್ದಾರೆ.