ಫೋನ್ ಇನ್ ಕಾರ್ಯಕ್ರಮ : ವೃದ್ಧಾಪ್ಯ ವೇತನ ಕಲ್ಪಿಸುವಂತೆ ಮನವಿ

07/05/2020

ಮಡಿಕೇರಿ ಮೇ 6 : ವೃದ್ಧಾಪ್ಯ ವೇತನ ಕಲ್ಪಿಸುವಂತೆ ಹಲವು ದೂರುಗಳು ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿ ಬಂದವು.
ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಇಲಾಖೆಗೆ ಸಂಬಂಧಿಸಿದಂತೆ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕಿನ ಕುಂದಾ ಗ್ರಾಮ ಮತ್ತು ಮಡಿಕೇರಿ ತಾಲ್ಲೂಕಿನ ಕುಂದಚೇರಿ ಚೆಟ್ಟಿಮಾನಿ ಗ್ರಾಮಸ್ಥರೊಬ್ಬರು ಕರೆಮಾಡಿ ವೃದ್ಧಾಪ್ಯ ವೇತನವು ಕಾಲ ಕಾಲಕ್ಕೆ ಖಾತೆಗೆ ಜಮೆಯಾಗುತ್ತಿಲ್ಲ ಎಂದು ಗಮನ ಸೆಳೆದರು.
ಈ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ಅವರು, ಸಂಬಂಧಿಸಿದ ಬ್ಯಾಂಕ್‍ಗೆ ಆಧಾರ್ ಪ್ರತಿ ನೀಡಬೇಕು. ಬ್ಯಾಂಕಿನ ಐಎಫ್‍ಎಸ್‍ಸಿ ಕೋಡ್ ಸರಿ ಇದೆಯೇ ಎಂಬುದನ್ನು ಪರಿಶೀಲಿಸುವಂತೆ ಸಲಹೆ ಮಾಡಿದರು.
ನಗರದ ಚಾಮುಂಡೇಶ್ವರಿ ಬಡಾವಣೆಯ ಚಂದ್ರಶೇಖರ್ ಅವರು ಕರೆಮಾಡಿ, 63 ವರ್ಷ ವಯಸ್ಸಾಗಿದ್ದು ವೃದ್ಧಾಪ್ಯ ವೇತನಕ್ಕೆ ಇನ್ನೂ ಅರ್ಜಿ ಸಲ್ಲಿಸಿಲ್ಲ, ಆದ್ದರಿಂದ ಇಲಾಖೆಯಿಂದ ಆರ್ಥಿಕ ಸಹಕಾರಕ್ಕೆ ಕೋರಿದರು.
ನಾಪೋಕ್ಲು ಬಳಿಯ ಕೋಕೇರಿ ಗ್ರಾಮದ ವ್ಯಕ್ತಿಯೊಬ್ಬರು ಕರೆ ಮಾಡಿ ಎಪಿಎಲ್ ಪಡಿತರ ಚೀಟಿದಾರರಿಗೆ ಇನ್ನೂ ಆಹಾರ ತಲುಪಿಲ್ಲ, ಈ ಬಗ್ಗೆ ಗಮನಹರಿಸಬೇಕೆಂದು ಕೋರಿದರು. ಈ ಸಂಬಂಧ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿದೇಶಕರು ತಿಳಿಸಿದರು.
ಹಿರಿಯ ನಾಗರಿಕರ ಮತ್ತು ವಿಕಲ ಚೇತನರ ಇಲಾಖೆ ಅಧಿಕಾರಿ ಸಂಪತ್ ಕುಮಾರ್, ಸಿಡಿಪಿಒಗಳಾದ ಸೀತಾಲಕ್ಷ್ಮೀ(ಪೊನ್ನಂಪೇಟೆ), ಸಿ.ಎಂ ಅಣ್ಣಯ್ಯ(ಸೋಮವಾರಪೇಟೆ), ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ಡಿ.ರವೀಂದ್ರ ಇತರರು ಹಾಜರಿದ್ದರು.