ಸಾರಿಗೆ ಸಿಬ್ಬಂದಿಗಳಿಗೆ ಶೀಘ್ರ ವೇತನ

07/05/2020

ಬೆಂಗಳೂರು ಮೇ 6 : ಸಾರಿಗೆ ಸಿಬ್ಬಂದಿಗಳ ವೇತನವನ್ನು ಮೂರು-ನಾಲ್ಕು ದಿನಗಳಲ್ಲಿ ಅವರವರ ಅಕೌಂಟ್ ಗಳಿಗೆ ತಲುಪಿಸುತ್ತೇವೆ. ಸಿಬ್ಬಂದಿಗಳಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.
ಸಾರಿಗೆ ಸಿಬ್ಬಂದಿಗಳ ವೇತನ ಸಂಬಂಧ ನಾನೀಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಡನೆ ಮಾತನಾಡಿದ್ದೇನೆ. ಸರ್ಕಾರದಿಂದ ನೇರವಾಗಿ 326 ಕೋಟಿ ರೂಪಾಯಿ ಪಡೆದುಕೊಂಡು ವೇತನ ನೀಡುವ ಕೆಲಸ ಮಾಡಲಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳಿಂದ 3500 ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಸುಮಾರು ಒಂದು ಲಕ್ಷ ವಲಸೆ ಕಾರ್ಮಿಕರನ್ನು ಬೆಂಗಳೂರಿನಿಂದ ಅವರ ಊರುಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯಪಡದೇ ಸಾರಿಗೆ ಸಿಬ್ಬಂದಿ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಜೀವದ ಭಯ ತೊರೆದು ವೈದ್ಯರು, ಆಶಾ ಕಾರ್ಯಕರ್ತೆಯರು, ಸಾರಿಗೆ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ. ಅಂತಹ ಸಿಬ್ಬಂದಿಗಳಿಗೆ ಹಾಗೂ ಆ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕೆಲಸವನ್ನು ಸರ್ಕಾರದ ವತಿಯಿಂದ ಮಾಡಿದ್ದೇವೆ ಎಂದರು.