ಕೂಡಿಗೆಯಲ್ಲಿ ಮಾದರಿ ಬೀಜೋತ್ಪಾದನಾ ಘಟಕ ಸ್ಥಾಪನೆ : ಸಚಿವ ಬಿ.ಸಿ.ಪಾಟೀಲ್ ಸಮಾಲೋಚನೆ

07/05/2020

ಮಡಿಕೇರಿ ಮೇ 6 : ಕೂಡಿಗೆಯಲ್ಲಿ ರಾಜ್ಯ ಮಟ್ಟದ ಬೀಜೋತ್ಪಾದನಾ ಕೇಂದ್ರವನ್ನು ಪ್ರಾರಂಭಿಸುವ ಕುರಿತು ಚಿಂತನೆ ಮಾಡಲಾಗಿದ್ದು, ಅದನ್ನು ಕಾರ್ಯಗತಗೊಳಿಸಲು ರಾಜ್ಯದ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಯೋಜನೆ ರೂಪಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಕೂಡಿಗೆಯಲ್ಲಿರುವ ಕೃಷಿ ಇಲಾಖೆಗೆ ಸೇರಿದ 25 ಎಕರೆ ಗದ್ದೆ ಪ್ರದೇಶವನ್ನು ಪರಿಶೀಲಿಸಿದ ಅವರು, ಮಣ್ಣು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಣ್ಣು ಪರೀಕ್ಷೆಯ ಹೊಸ ಮಾದರಿ ಘಟಕಗಳ ಬಗ್ಗೆ ಮಾಹಿತಿ ಪಡೆದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಸಚಿವರು, ಜಿಲ್ಲೆಯ ರೈತರಿಗೆ ಬೇಕಾಗುವ ಎಲ್ಲಾ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳನ್ನು ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಅದರ ಸದುಪಯೋಗವನ್ನು ರೈತರು ಪಡೆದಕೊಳ್ಳುವಂತೆ ಮನವಿ ಮಾಡಿದರು.
ಕೃಷಿ ಕ್ಷೇತ್ರದ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ಪ್ರಾರಂಭಿಸುವ ಪ್ರಕ್ರಿಯೆ ಆರಂಭವಾಗಿರುವ ಬಗ್ಗೆ ಪತ್ರಕರ್ತರು ಗಮನಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ತಮ್ಮ ಇಲಾಖೆಯ ಜಾಗವನ್ನು ಬೇರೆ ಉದ್ದೇಶಕ್ಕೆ ನೀಡುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಕೃಷಿಗೆ ಪೂರಕವಾದ ಚಟುವಟಿಕೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮಿನಿ ವಿಮಾನ ನಿಲ್ದಾಣದ ಪ್ರಾರಂಭಿಸುವ ವಿಚಾರ ಈಗಷ್ಟೇ ಗಮನಕ್ಕೆ ಬಂದಿದ್ದು ಅದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಸಚಿವರು ಹೇಳಿದರು.
ಕೃಷಿ ಉಪ ನಿರ್ದೇಶಕ ಕೆ.ರಾಜು, ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್. ಎಸ್. ರಾಜಶೇಖರ, ಉಪ ಕೃಷಿ ವಿಶೇಷ ನಿರ್ದೇಶಕ ಎ.ಸಿ.ಮಂಜು, ಕೂಡಿಗೆ ಕೃಷಿ ಕ್ಷೇತ್ರದ ಅಧಿಕಾರಿ ಮಾಧವರಾವ್, ಮಣ್ಣು ಪರೀಕ್ಷಾ ಕೇಂದ್ರದ ಅಧಿಕಾರಿಗಳು ಹಾಜರಿದ್ದರು.