ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ

07/05/2020

ಮಡಿಕೇರಿ ಮೇ 7 : ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾಳಿಯ ಜನಕ ಪಾಂಡಂಡ ಕುಟ್ಟಪ್ಪ (ಕುಟ್ಟಣಿ-86) ಅವರು ಗುರುವಾರ ಪೂರ್ವಾಹ್ನ ಬೆಂಗಳೂರಿನ ಅವರ ಸ್ವಗೃಹದಲ್ಲಿ ನಿಧನರಾದರು.
ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‍ಬಿಐ)ನ ನಿವೃತ್ತ ವ್ಯವಸ್ಥಾಪಕರಾಗಿದ್ದ ಕುಟ್ಟಪ್ಪ ಅವರು ಹಾಕಿ ಪ್ರಿಯರಾಗಿದ್ದು, ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟ ಆಯೋಜಿಸುವ ಯೋಜನೆ ರೂಪಿಸಿದ್ದಲ್ಲದೆ, 1997ರಲ್ಲಿ ತಮ್ಮದೇ ಕುಟುಂಬದ ಹೆಸರಿನಲ್ಲಿ ತಮ್ಮ ಸ್ವಗ್ರಾಮ ಕರಡದಲ್ಲಿ ಮೊದಲ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದರು.
ಮುಂದಿನ ದಿನಗಳಲ್ಲಿ ಪ್ರತೀ ವರ್ಷ ಕೊಡಗಿನಲ್ಲಿ ಒಲಂಪಿಕ್ ಮಾದರಿಯಲ್ಲಿ ಒಂದು ತಿಂಗಳ ಕಾಲ ಕೌಟುಂಬಿಕ ಹಾಕಿ ಪಂದ್ಯಾವಳಿ ನಡೆಯುವುದರೊಂದಿಗೆ ವಿಶ್ವದ ಗಮನಸೆಳೆದಿತ್ತಲ್ಲದೆ, ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲೂ ಸ್ಥಾನ ಪಡೆದಿತ್ತು.
ಕಳೆದ 22 ವರ್ಷಗಳಿಂದಲೂ ಕುಟ್ಪಪ್ಪ ಅವರ ಆಶಯದಂತೆ ವರ್ಷಕ್ಕೊಂದು ಕೊಡವ ಕುಟುಂಬಗಳು ಹಾಕಿ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬರುತ್ತಿದ್ದು, ಕಳೆದ ವರ್ಷ ಮಹಾಮಳೆ ಹಾಗೂ ಈ ವರ್ಷ ಕೊರೋನಾ ಲಾಕ್‍ಡೌನ್‍ನಿಂದಾಗಿ ಹಾಕಿ ಹಬ್ಬ ರದ್ದಾಗಿತ್ತು.
ಕೊಡವ ಕೌಟುಂಬಿಕ ಹಾಕಿ ಹಬ್ಬದ ಜನಕ ಎಂದೇ ಖ್ಯಾತರಾಗಿದ್ದ ಕುಟ್ಟಪ್ಪ ಅವರು ಇನ್ನು ನೆನಪು ಮಾತ್ರವಾಗಿದ್ದು, ಕೊರೋನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನ ನವರಂಗ್ ಸಮೀಪದ ಹರಿಶ್ಚಂದ್ರಘಾಟ್‍ನಲ್ಲಿ ಕುಟ್ಟಪ್ಪ ಅವರ ಅಂತ್ಯಕ್ರಿಯೆ ನಡೆಸಲಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.