ಎರಡು ತಿಂಗಳ ಬಳಿಕ ತವರು ತಲುಪಿದ ವಿದ್ಯಾರ್ಥಿಗಳು : ಪೋಷಕರ ಮೊಗದಲ್ಲಿ ಮೂಡಿದ ಮಂದಹಾಸ

07/05/2020

ಮಡಿಕೇರಿ ಮೇ 7 : ಕೊರೋನಾ ಲಾಕ್‍ಡೌನ್‍ನಿಂದ ವಿವಿಧ ರಾಜ್ಯಗಳ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಸಿಲುಕಿಕೊಂಡಿದ್ದ 55 ವಿದ್ಯಾರ್ಥಿಗಳು ಗುರುವಾರ ತಮ್ಮ ತವರೂರಿಗೆ ತಲುಪಿದ್ದು, ಕಳೆದ ಎರಡು ತಿಂಗಳುಗಳಿಂದ ತಮ್ಮ ಮಕ್ಕಳನ್ನು ಕಾಣದೆ ಕಂಗಾಲಾಗಿದ್ದ ಪೋಷಕರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.
ಲಾಕ್‍ಡೌನ್‍ನಿಂದಾಗಿ ಮಧ್ಯ ಪ್ರದೇಶದ ಇಂದೋರ್‍ನ 24 ವಿದ್ಯಾರ್ಥಿಗಳು ಮಡಿಕೇರಿಯ ಗಾಳಿಬೀಡುವಿನಲ್ಲಿರುವ ನವೋದಯ ವಿದ್ಯಾಲಯದಲ್ಲಿ ಹಾಗೂ ಕೊಡಗಿನ 21 ವಿದ್ಯಾರ್ಥಿಗಳು ಮಧ್ಯಪ್ರದೇಶದ ಇಂದೋರ್‍ನ ನವೋದಯ ವಿದ್ಯಾಲಯದಲ್ಲಿ ಸಿಲುಕಿದ್ದರು.
ಈ ಕುರಿತು ನವೋದಯ ವಿದ್ಯಾಯಲದ ಪ್ರಾಂಶುಪಾಲರು ಜಿಲ್ಲಾಡಳಿತದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿಯಮಾನುಸಾರ ಬಸ್ ವ್ಯವಸ್ಥೆಯನ್ನು ಕಲ್ಪಿಸಿ, ಇಬ್ಬರು ಶಿಕ್ಷಕರ ಬೆಂಗಾವಲಿನಲ್ಲಿ ಈ ಜಿಲ್ಲೆಯಲ್ಲಿ ಸಿಲುಕಿದ್ದ 24 ವಿದ್ಯಾರ್ಥಿಗಳನ್ನು ಕೊಲ್ಲಾಪುರದವರೆಗೆ ಬಿಟ್ಟು, ಇಂದೋರ್‍ನಿಂದ ಕೊಡಗಿಗೆ ಆಗಮಿಸುವ ಇಲ್ಲಿನ ವಿದ್ಯಾರ್ಥಿಗಳನ್ನು ಕೊಲ್ಲಾಪುರದವರೆಗೆ ಅಲ್ಲಿನ ಶಾಲೆಯ ಶಿಕ್ಷಕರ ಬೆಂಗಾವಲಿನಲ್ಲಿ ಕರೆತರುವಂತೆ ಅನುಮತಿ ನೀಡಿದ್ದರು. ಅದರಂತೆ ಎರಡೂ ಕಡೆಯ ವಿದ್ಯಾರ್ಥಿಗಳನ್ನು ಮಾರ್ಗ ಮಧ್ಯೆ ನಿಗದಿಪಡಿಸಿದ ಕೊಲ್ಲಾಪುರದಲ್ಲಿ ಅದಲು ಬದಲು ಮಾಡಿಕೊಳ್ಳುವುದೆಂದು ತೀರ್ಮಾನಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಎರಡೂ ಕಡೆಯಿಂದ ಮೇ 5ರಂದು ಮಧ್ಯಾಹ್ನ 2.30 ಗಂಟೆಗೆ ವಿದ್ಯಾರ್ಥಿಗಳನ್ನು ಹೊತ್ತ ಬಸ್‍ಗಳು ಹೊರಟು ಕೊಲ್ಲಾಪುರದಲ್ಲಿ ಮಕ್ಕಳನ್ನು ಅದಲು ಬದಲು ಮಾಡಿಕೊಂಡು ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಡಿಕೇರಿಗೆ ತಲುಪಿದ್ದು, ನವೋದಯ ವಿದ್ಯಾಲಯದ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಬಳಿಕ ಅವರ ನೇತೃತ್ವದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.
ಇದರೊಂದಿಗೆ ಕಳೆದ ಎರಡು ತಿಂಗಳುಗಳಿಂದ ಮಕ್ಕಳ ಬಗ್ಗೆ ಆತಂಕಕ್ಕೆ ಒಳಗಾಗಿದ್ದ ಮಕ್ಕಳ ಪೋಷಕರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.