ಚೆಕ್ ಪೋಸ್ಟ್ ಗಳಲ್ಲಿ ಕಿಖ ಕೋಡ್ ಪರಿಶೀಲನೆ ಕಡ್ಡಾಯ

May 7, 2020

ಮಡಿಕೇರಿ ಮೇ 7 : ಸೇವಾ ಸಿಂಧು ತಂತ್ರಾಂಶದಲ್ಲಿ ವಿತರಿಸಲಾದ ಇ-ಪಾಸ್ ನ ನೈಜತೆಯನ್ನು ತಿಳಿಯಲು ಚೆಕ್ ಪೋಸ್ಟ್ ಗಳಲ್ಲಿ ಕಿಖ ಕೋಡ್ ಗಳನ್ನು ಪರಿಶೀಲಿಸುವುದನ್ನು ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕೋವಿಡ್-19 ರ ಸಂಬಂಧ ಲಾಕ್ ಡೌನ್ ನಿಂದ ವಿವಿಧ ರಾಜ್ಯಗಳಲ್ಲಿ ಸಿಲುಕಿದ ಜನರು ಇತರೆ ರಾಜ್ಯಗಳಿಂದ ನೀಡಲಾದ ಇ-ಪಾಸ್ ಅಥವಾ ಹಸ್ತಾಕ್ಷರದ ಮೂಲಕ ವಿತರಿಸಲಾದ ಪಾಸ್ ಗಳ ಮುಖಾಂತರ ಕೊಡಗು ಜಿಲ್ಲೆಗೆ ಪ್ರವೇಶಿಸಲು ಜಿಲ್ಲೆಗೆ ಪ್ರವೇಶ ಕಲ್ಪಿಸುವ ಚೆಕ್ ಪೋಸ್ಟ್ ಗಳ ಬಳಿ ಬರುತ್ತಿರುವುದನ್ನು ಗಮನಿಸಲಾಗಿದೆ.
ಆದರೆ ಕರ್ನಾಟಕ ರಾಜ್ಯ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ ಕರ್ನಾಟಕ ರಾಜ್ಯಸರ್ಕಾರದಿಂದ ರೂಪಿಸಲಾದ ಸೇವಾ ಸಿಂಧು ತಂತ್ರಾಂಶದ ಮೂಲಕ ವಿತರಿಸಲಾದ ಇ-ಪಾಸ್ ನ ಪ್ರತಿಯನ್ನು ಹಾಜರು ಪಡಿಸಿದಲ್ಲಿ ಮಾತ್ರ ಕರ್ನಾಟಕ ರಾಜ್ಯ/ಜಿಲ್ಲೆಯೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ.
ಅದರಂತೆ ಕೊಡಗು ಜಿಲ್ಲೆಗೆ ಪ್ರವೇಶ ಬಯಸುವ ಜನರು ಕರ್ನಾಟಕ ರಾಜ್ಯಸರ್ಕಾರದಿಂದ ರೂಪಿಸಲಾದ ಸೇವಾ ಸಿಂಧು ತಂತ್ರಾಂಶದ ಮೂಲಕ ವಿತರಿಸಲಾದ ಇ-ಪಾಸ್ ನ ಪ್ರತಿ ಮತ್ತು ಕೊಡಗು ಜಿಲ್ಲೆಯ ನಿವಾಸಿಗಳೆಂದು ಸಾಬೀತು ಪಡಿಸುವ ಅಧಿಕೃತ ದಾಖಲೆಗಳನ್ನು ಹಾಜರು ಪಡಿಸಿದವರಿಗೆ ಮಾತ್ರ ಕೊಡಗು ಜಿಲ್ಲೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

error: Content is protected !!