ಹಮಾಲಿ (ತಲೆಹೊರೆ) ಕಾರ್ಮಿಕರಿಗೂ ಆರ್ಥಿಕ ನೆರವು ನೀಡಲು ಮನವಿ

07/05/2020

ಮಡಿಕೇರಿ ಮೇ 7 : ಕೊರೊನಾ ಲಾಕ್‍ಡಾನ್ ನಿಂದ ಸಂಕಷ್ಟಕ್ಕೀಡಾಗಿರುವ ಅಸಂಘಟಿತ ಕಾರ್ಮಿಕರಿಗೆ ಘೋಷಿಸಲಾದ ಪ್ಯಾಕೇಜ್‍ನಲ್ಲಿ ಶ್ರಮಜೀವಿ ಹಮಾಲಿ ಕಾರ್ಮಿಕರಿಗೂ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ನ ಕೊಡಗು ಜಿಲ್ಲಾ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ವಿಧಿಸಲಾದ ಲಾಕ್‍ಡಾನ್ ಮತ್ತೆ ಮುಂದುವರೆಸಲಾಗಿದೆ. ಆದರೆ ಈ ಲಾಕ್‍ಡಾನ್‍ನಿಂದಾಗಿ ನಿತ್ಯದ ದುಡಿಮೆಯಿಂದ ಬರುವ ಕೂಲಿಯಿಂದಲೇ ಬದುಕು ಕಟ್ಟಿಕೊಂಡಿರುವ ಅಸಂಘಟಿತ ಕಾರ್ಮಿಕರು ಉದ್ಯೋಗವಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರಕಾರ ಅಸಂಘಟಿತ ಕಾರ್ಮಿಕರಿಗೆ ರೂ.1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಅಸಂಘಟಿತ ಕಾರ್ಮಿಕರಲ್ಲಿಯೇ ಅತ್ಯಂತ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರ ಬದುಕು ಅತ್ಯಂತ ಶೋಚನೀಯವಾಗಿದೆ.
ಲಾಕ್‍ಡಾನ್ ದಿನಗಳಲ್ಲಿ ಎಪಿಎಂಸಿ, ಗಿರಣಿ, ಸಾರಿಗೆ, ಖಾಸಗಿ, ಸರಕಾರಿ ಗೋದಾಮು, ಬಸ್ ನಿಲ್ದಾಣ ಮತ್ತಿತರ ಚಟುವಟಿಕೆಗಳು ಬಂದ್ ಆಗಿ ಉದ್ಯೋಗವನ್ನು ಕಳೆದುಕೊಂಡು ಹಸಿವಿನ ದವಡೆಗೆ ತಳ್ಳಲ್ಪಪಟ್ಟಿದ್ದಾರೆ. ಇತ್ತೀಚೆಗೆ ಕೆಲವು ದಿನಗಳಿಂದ ಎಪಿಎಂಸಿ, ಸರಕಾರಿ ಗೋದಾಮುಗಳಲ್ಲಿ ಚಟುವಟಿಕೆ ಆರಂಭವಾಗಿದ್ದರೂ ಕಡಿಮೆ ಸಂಖ್ಯೆಯ ಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸಬೇಕಾಗಿದೆ.
ರಾಜ್ಯದಲ್ಲಿ ಸುಮಾರು 4 ರಿಂದ 5 ಲಕ್ಷದಷ್ಟಿರುವ ಹಮಾಲಿ ಕಾರ್ಮಿಕರ ಕುಟುಂಬಗಳು ಹಸಿವಿನಿಂದ ಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‍ನಲ್ಲಿ ತಲಾ 5 ಸಾವಿರ ರೂ.ಗಳನ್ನು ಇವರಿಗೂ ನೀಡಬೇಕೆಂದು ಭರತ್ ಒತ್ತಾಯಿಸಿದರು.