ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆಗೆ ಅವಕಾಶ ಕಲ್ಪಿಸಲು ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘ ಮನವಿ

07/05/2020

ಮಡಿಕೇರಿ ಮೇ 7 : ಕೊರೋನಾ ಸೋಂಕು ಭೀತಿ ಹಿನ್ನೆಲೆ ಜಾರಿಯಾಗಿದ್ದ ಲಾಕ್ ಡೌನ್ ಆದೇಶದಲ್ಲಿ ಪ್ರಸ್ತುತ ಕೊಂಚ ಸಡಿಲಿಕೆ ನೀಡಿದ್ದು, ಹಸಿರ ವಲಯದಲ್ಲಿರುವ ಕೊಡಗಿನ ದೇವಾಲಯಗಳ ಬಾಗಿಲು ತೆರೆದು ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂದೂ ಧರ್ಮದ ಧಾರ್ಮಿಕತೆಯ ಭಾವನೆ ಎಂದರೆ ದೇವಾಲಯಗಳಿಗೆ ಹೋಗಿ ಲೋಕ ಕಲ್ಯಾಣ ಮತ್ತು ತಮ್ಮ ಒಳಿತಿಗಾಗಿ ಕೈಮುಗಿದು, ಪ್ರಾರ್ಥಿಸಿ ಕಷ್ಟಸುಖಗಳನ್ನು ಹಂಚಿಕೊಂಡು ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಅದರಂತೆ ಕುಟುಂಬದಲ್ಲಿ ಯಾರಾದರೂ ನಿಧನ ಹೊಂದಿದರೆ 48 ದಿನಕ್ಕೆ ಭಾಗಮಂಡಲಕ್ಕೆ ಹೋಗಿ ಪಿಂಡ ಪ್ರದಾನ ಮಾಡುವ ಪದ್ಧತಿ ಇದ್ದು, ಮೃತರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎನ್ನುವ ನಂಬಿಕೆಯೂ ಜನರಲ್ಲಿದೆ.
ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಕಾರ್ಯವನ್ನು ಯಾವುದೇ ಹಬ್ಬ ಹರಿದಿನಗಳು ಹಾಗೂ ಮದುವೆ ಸಮಾರಂಭಗಳಂತೆ ಮುಂದೂಡಲು ಸಾಧ್ಯವಿಲ್ಲ. ಇದು ಆಯಾ ಕಾಲಕ್ಕೆ ನಡೆಯಲೇಬೇಕಾಗುತ್ತದೆ ಎಂದು ಮಹಾಬಲೇಶ್ವರ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಪೂಜಾ ಕೈಂಕರ್ಯವಿಲ್ಲದೆ ಕೆಲವು ಅರ್ಚಕರು ಕಂಗಾಲಗಿರುವುದರಿಂದ ಸಮಾಜಿಕ ಅಂತರವನ್ನು ಕಾಯ್ದುಕೊಂಡು ನಿಯಮಾವಳಿಯ ಪ್ರಕಾರ ದಿನನಿತ್ಯ ಪೂಜೆ ಸಲ್ಲಿಸಲು ಹಾಗೂ ದೇವಾಲಯಗಳಿಗೆ ಭಕ್ತರು ಆಗಮಿಸಲು ಅವಕಾಶ ಕಲ್ಪಿಸುವಂತೆ ಅವರು ಮನವಿ ಮಾಡಿದ್ದಾರೆ.
::: ಅರ್ಚಕರ ಕಡೆಗಣನೆ :::
ವಿವಿಧ ಕ್ಷೇತ್ರಗಳ ಶ್ರಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿರುವ ರಾಜ್ಯ ಸರ್ಕಾರ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬಡ ಅರ್ಚಕ ವೃಂದ ಹಾಗೂ ಅಡುಗೆಯವರನ್ನು ಕಡೆಗಣಿಸಿದೆ ಎಂದು ಮಹಾಬಲೇಶ್ವರ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾಭಿಮಾನದಿಂದ ಬದುಕುತ್ತಿರುವ ನಾವು ಬೇರೆಯವರ ಬಳಿ ನೆರವು ಕೇಳಲಾಗದೆ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಪ್ರಾಚೀನ ಇತಿಹಾಸವನ್ನು ಹೊಂದಿರುವ ಪವಿತ್ರವಾದ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ದೇವಾಲಯದ ಆರ್ಚಕರು, ಪುರೋಹಿತರ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇದನ್ನು ಮನಗಂಡು ಸರ್ಕಾರ ನೆರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ. ಅರ್ಚಕರ ಸಂಕಷ್ಟಕ್ಕೆ ಸ್ಪಂದಿಸಿದ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಿಗೆ ಅವರು ಇದೇ ಸಂದರ್ಭ ಕೃತಜ್ಞತೆ ಸಲ್ಲಿಸಿದ್ದಾರೆ.