ದಲಿತ ಸಂಘರ್ಷ ಸಮಿತಿಯಿಂದ ಪೌರಕಾರ್ಮಿಕರಿಗೆ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ

08/05/2020

ಮಡಿಕೇರಿ ಮೇ 8 : ಮಡಿಕೇರಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ‘ಬುದ್ಧ ಪೌರ್ಣಮಿಯ’ ಆಚರಣೆಯನ್ನು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯು ನಗರದ ಪೌರಕಾರ್ಮಿಕರಿಗೆ ಅಗತ್ಯ ಆಹಾರ ಕಿಟ್ ಹಾಗೂ ಉಚಿತ ಮಾಸ್ಕ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಕೊರೋನಾ ಹಿನ್ನೆಲೆ ಬಡ ಪೌರಕಾರ್ಮಿಕರು ಹಾಗೂ ಅವರ ಕುಟುಂಬ ಅಗತ್ಯ ಆಹಾರ ಸಾಮಾಗ್ರಿಗಳ ಕೊರತೆಯಲ್ಲಿದ್ದು, ಅವರ ಬೆಂಬಲಕ್ಕೆ ನಿಲ್ಲುವ ಸಲುವಾಗಿ ಹಾಗೂ ಅವರ ಆರೋಗ್ಯದ ಹಿತದೃಷ್ಠಿಯನ್ನು ಮನಗಂಡು ಆಯೋಜಿಸಿದ್ದ ಈ ಕಾರ್ಯಕ್ರಮವನ್ನು, ಜಿಲ್ಲಾಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸೌಮ್ಯ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಂಘನೆಯ ಮೂಲಕ ಪೌರಕಾರ್ಮಿಕರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ಚಾಚುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೇ ಬುದ್ಧನ ತತ್ವಸಿದ್ಧಾಂತಗಳು ಮತ್ತು ಆಶಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ವಕೀಲ ಕೃಷ್ಣಮೂರ್ತಿ ಅವರು ಮಾತನಾಡಿ “ಪೌರಕಾರ್ಮಿಕರು ಒಂದು ಪಕ್ಷ ಇಲ್ಲವಾದರೆ ಪ್ರಪಂಚವೇ ಕಸದ ಕೊಂಪೆಯಾಗಿ ಮಾರ್ಪಡುತ್ತಿತ್ತು. ಅಲ್ಲದೆ ವಿವಿಧ ರೋಗಗಳಿಗೆ ತುತ್ತಾಗಿ ಮಾನವ ಕುಲವೇ ಇಲ್ಲದಾಗುತ್ತಿತ್ತು. ಮನಸ್ಸಿನ ಶುದ್ಧಿಗಾಗಿ ನಾವುಗಳು ದೇವಾಲಯಕ್ಕೆ ಹೋದರೆ ನಮ್ಮ ಪರಿಸರದ ಶುಚಿತ್ವಕ್ಕಾಗಿ ನಾವುಗಳು ಬೆಳಗೆದ್ದ ಕೂಡಲೇ ಪೌರಕಾರ್ಮಿಕರ ಬರುವಿಕೆಯನ್ನು ಎದುರುನೋಡುತ್ತೇವೆ. ಪೌರಕಾರ್ಮಿಕರು ಸಮಾಜದ ಹಿರೋಗಳು ಎಂದು ಹೇಳಿದರು.
ಪ್ರತಿಯೋರ್ವರೂ ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳನ್ನು ಪಾಲಿಸುವಂತೆ ಕರೆನೀಡಿ, ಭಾರತದ ಪ್ರತಿಯೋರ್ವ ಪ್ರಜೆಯೂ ಸಂವಿಧಾನವನ್ನು ಓದಲೇಬೇಕೆಂದು ಹಾಗೂ ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತರಾಗುವಂತೆ ತಮ್ಮ ಅಭಿಲಾಷೆಯನ್ನು ತೋಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹೆಚ್ ಎಲ್ ದಿವಾಕರ್ ಮಾತನಾಡಿ ಸಮಾಜದ ಬಹುಮುಖ್ಯ ಅಂಗವಾಗಿರುವ ಪೌರಕಾರ್ಮಿಕರನ್ನು ಸಮಾಜದ ಯಾವುದೇ ಸಂಘ ಸಂಸ್ಥೆಗಳು ಗುರುತಿಸದಿರುವುದು ವಿಷಾದಕರ. ಸಮಾಜದ ಏಳಿಗೆಗಾಗಿ ಬಿಸಿಲು, ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಹಗಲು ರಾತ್ರಿ ದುಡಿಯುವ ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಎಷ್ಟೇ ಕಷ್ಟವಾದರು ವಿದ್ಯಾಭ್ಯಾಸವನ್ನು ನೀಡಬೇಕೆಂದರಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಬೇಕಾದಲ್ಲಿ ಸಂಘಟನೆಯ ಗಮನಕ್ಕೆ ತರುವಂತೆ ತಿಳಿಸಿದರು.
ಮಡಿಕೇರಿ ತಾಲೂಕು ಘಟಕ ಅಧ್ಯಕ್ಷ ಎ.ಪಿ. ದೀಪಕ್ ಮಾತನಾಡಿ, ಸಮಾಜದ ಸ್ವಚ್ಚತೆಯನ್ನು ಕಾಪಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಕಾಪಾಡುವ ಮೂಲಕ ಕೊರೋನಾ ವೈರಾಣು ಸೋಂಕದಂತೆ ಎಚ್ಚರ ವಹಿಸಬೇಕು ಎಂದರಲ್ಲದೇ ಪೌರಕಾರ್ಮಿಕರಿಗೆ ಮುಖದ ಮಾಸ್ಕಿನ ಮಹತ್ವದ ಕುರಿತು ಅರಿವು ಮೂಡಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ 55 ಪೌರಕಾರ್ಮಿಕರಿಗೆ ಅಗತ್ಯ ಆಹಾರ ಕಿಟ್‍ವಿತರಿಸಿ ಉಚಿತ ಮಾಸ್ಕ್‍ಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಲ್.ಐ.ಸಿ ವಿಮಾ ಅಭಿವೃದ್ಧಿ ಅಧಿಕಾರಿ ಸೋಮೆಶ್, ಮದೆ ಮಹದೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಹಾಗೂ ಮಡಿಕೇರಿ ನಗರ ಸಂಚಾಲಕರಾದ ಸಿದ್ದೇಶ್ವರ್ ಹಾಜರಿದ್ದರು.