ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

08/05/2020

ವಿಶಾಖಪಟ್ಟಣಂ ಮೇ 7 : ಆಂಧ್ರದ ವಿಶಾಖಪಟ್ಟಣ ಜಿಲ್ಲೆಯ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.
ಇಂದು ಮುಂಜಾನೆ ಸುಮಾರು 3 ಗಂಟೆ ಹೊತ್ತಿನಲ್ಲಿ ವಿಶಾಖಪಟ್ಟಣಂನ ಗೋಪಾಲಪಟ್ಟಣದ, ನಾಯ್ಡು ತೋಟಾ ಸಮೀಪದ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲ ಪ್ರದೇಶಗಳಿಗೆ ಹರಡಿದೆ. ಪರಿಣಾಮ ಬೆಳಗ್ಗೆ ವಾಕಿಂಗ್ ಗೆ ಮತ್ತು ಇತರೆ ಕಾರ್ಯಗಳಿಗೆ ಬಂದವರು ವಿಷಾನಿಲವನ್ನು ಉಸಿರಾಡಿ ಕೂಡಲೇ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಇಬ್ಬರು ವೃದ್ಧರು, 7 ವರ್ಷದ ಬಾಲಕಿ ಸೇರಿದಂತೆ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಐದು ಮಂದಿ ಆಸ್ಪತ್ರೆಗೆ ಸೇರಿಸುವ ಮುನ್ನವೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಮಾತನಾಡಿರುವ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಮೃತರ ಕುಟುಂಬಕ್ಕೆ 1 ಕೋಟಿ ರುಪಾಯಿ ಪರಿಹಾರ ಘೋಷಿಸಲಾಗಿದೆ. ಇದರ ಜೊತೆಗೆ ಅಸ್ವಸ್ಥರ ಚಿಕಿತ್ಸೆಯನ್ನು ರಾಜ್ಯ ಸರ್ಕಾರವೇ ಬರಿಸಲಿದೆ. ಇನ್ನು ತೀವ್ರ ಅಸ್ವಸ್ಥರಿಗೆ 10 ಲಕ್ಷ ಪರಿಹಾರ. ಆಸ್ಪತ್ರೆಯಲ್ಲಿ 2-3 ದಿನ ಉಳಿದವರಿಗೆ 5 ಲಕ್ಷ, ಗಾಯಾಳುಗಳಿಗೆ 1 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದರು.