100ಕ್ಕೂ ಹೆಚ್ಚು ರೈಲುಗಳ ಸಂಚಾರ

May 8, 2020

ಬೆಂಗಳೂರು ಮೇ 7 : ವಲಸೆ ಕಾರ್ಮಿಕರು, ಪ್ರತಿಪಕ್ಷ ನಾಯಕರು ಹಾಗೂ ನಾಗರಿಕ ಹೋರಾಟಗಾರರ ತೀವ್ರ ಒತ್ತಡದಿಂದಾಗಿ ಶ್ರಮಿಕ್ ವಿಶೇಷ ರೈಲುಗಳನ್ನು ನಿಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯ ಸರ್ಕಾರ, ನಾಳೆಯಿಂದ ಮೇ. 15ರವರೆಗೂ 9 ರಾಜ್ಯಗಳಿಗೆ 100ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ಇಂದು ನಿರ್ಧರಿಸಿದೆ.
ಈ ನಿರ್ಧಾರಕ್ಕೆ ಎರಡು ರಾಜ್ಯಗಳಿಗೆ ಈಗಾಗಲೇ ಸಮ್ಮತಿ ನೀಡಿವೆ. ಶುಕ್ರವಾರದಿಂದ ರೈಲುಗಳ ಓಡಾಟವನ್ನು ಪುನರ್ ಆರಂಭಿಸಬೇಕಾ ಅಥವಾ ಶನಿವಾರದಿಂದ ಆರಂಭಿಸಬೇಕಾ ಎಂಬುದನ್ನು ನಿರ್ಧರಿಸಬೇಕಾಗಿದೆ.
ಈ ಸಂಬಂಧ ಇಂದು ಬೆಳಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಹಾಗೂ ರೈಲ್ವೆ ವಿಭಾಗೀಯ ಮಟ್ಟದ ಮ್ಯಾನೇಜರ್ ಗಳು ಪಾಲ್ಗೊಂಡಿದ್ದರು. ವಿಶೇಷ ರೈಲುಗಳ ಓಡಾಟವನ್ನು ಪುನರ್ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ವಲಸೆ ಕಾರ್ಮಿಕರಿಗಾಗಿ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿರುವ ಮಂಜುನಾಥ್ ಪ್ರಸಾದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಸರ್ಕಾರದ ನಿರ್ದೇಶನದಂತೆ, ಈ ರೈಲುಗಳ ಓಡಾಟಕ್ಕೆ ಅನುಮತಿ ನೀಡುವಂತೆ ವಿವಿಧ ರಾಜ್ಯಸರ್ಕಾರಗಳಿಗೆ ಪತ್ರ ಬರೆದಿದ್ದೇನೆ. ಜಾರ್ಖಂಡ್, ಬಿಹಾರ, ಒಡಿಶಾ, ಮಣಿಪುರ, ತ್ರಿಪುರಾ, ಪಶ್ಚಿಮ ಬಂಗಾಳ, ರಾಜಸ್ತಾನ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಿಗೆ ಅಧಿಕೃತ ಮಾಹಿತಿಯನ್ನು ಕಳುಹಿಸಲಾಗಿದೆ. ಲಾಕ್ ಡೌನ್ ನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಮತ್ತಿತರರಿಗೆ ಈ ರೈಲುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.