ಶಾಲಾ ಶೈಕ್ಷಣಿಕ ಪಠ್ಯ ಕಡಿತ

ಬೆಂಗಳೂರು ಮೇ 7 : ಕೋವಿಡ್ ನಿಂದಾಗಿ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ ಇದ್ದು, ಅದಕ್ಕೆ ಸರಿಹೊಂದುವಂತೆ ಶೈಕ್ಷಣಿಕ ವರ್ಷವನ್ನು ಸರಿದೂಗಿಸಬೇಕಾದ ಅಗತ್ಯವಿರುವುದರಿಂದ ಶಾಲಾ ಶೈಕ್ಷಣಿಕ ಪಠ್ಯವನ್ನು ಆ ಅವಧಿಗೆ ತಕ್ಕಂತೆ ರೂಪಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಸಚಿವರು ಈ ಶೈಕ್ಷಣಿಕ ಸಾಲಿನ ಪ್ರಾರಂಭದ ಬಗ್ಗೆ ಈ ಹಂತದಲ್ಲಿ ನಿರ್ಣಯಿಸಲು ಸಾಧ್ಯವಾಗದ ಕಾರಣ 1ರಿಂದ 10ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿ ಎನ್ನುವ ಪಠ್ಯವನ್ನು ಗುರುತಿಸುವ ಪ್ರಯತ್ನಕ್ಕೆ ಕೂಡಲೇ ಚಾಲನೆ ನೀಡಬೇಕೆಂದರು.
ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವಧಿಯ ಆಧಾರದ ಮೇಲೆ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ ಅನವಶ್ಯಕ ಪುನರಾವರ್ತಿತವಾದ ಪಠ್ಯವನ್ನು ಕೈಬಿಡಬೇಕು. ಅತ್ಯವಶ್ಯಕವಾದ ಪಠ್ಯವನ್ನು ಉಳಿಸಿಕೊಳ್ಳಲು ಕ್ರಿಯಾ ಯೋಜನೆಯನ್ನು ಕೂಡಲೇ ಸಿದ್ಧಪಡಿಸಬೇಕು. ಕೊರೋನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಕಡಿತವಾಗಬಹುದಾದ ಅವಧಿಯ ಆಧಾರದಲ್ಲಿ ಪ್ರತಿ ತರಗತಿ ಹಾಗೂ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ 15 ದಿನಗಳ, 1 ತಿಂಗಳ, ಒಂದುವರೆ ತಿಂಗಳ, 2 ತಿಂಗಳ ಹಂತವಾರು ಹೆಚ್ಚುವರಿಯಾಗಬಹುದಾದ ಪಠ್ಯಗಳನ್ನುಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತ್ರತ ವರದಿ ತಯಾರಿಸಬೇಕೆಂದು ಸಚಿವರು ಸೂಚಿಸಿದರು.