ಸಂಕಷ್ಟದಲ್ಲಿ ಕೊಡಗು ಕಾಫಿ ಉದ್ಯಮ : ವಿಶೇಷ ಪ್ಯಾಕೇಜ್‍ಗೆ ಬೆಳೆಗಾರರ ಒಕ್ಕೂಟ ಒತ್ತಾಯ

08/05/2020

ಮಡಿಕೇರಿ ಮೇ 8 : ಕೋವಿಡ್ -19 ಲಾಕ್‍ಡೌನ್ ನಿಂದಾಗಿ ಕೊಡಗಿನ ಬೆಳೆಗಾರ ಸಮುದಾಯ ತೀವ್ರ ಸಂಕಷ್ಟ ಎದುರಿಸುತ್ತಿದ್ದು ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಜಿಲ್ಲೆಯ ವಿವಿಧ ಬೆಳೆಗಾರರ ಸಂಘಟನೆಗಳಿಗೆ ಸೇರಿದ ಬೆಳೆಗಾರರ ಒಕ್ಕೂಟವು ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಬೆಳೆಗಾರರ ಒಕ್ಕೂಟದ ಮನವಿಯ ಮುಖ್ಯಾಂಶಗಳು ಇಂತಿದೆ: ಕೊಡಗು ಜಿಲ್ಲೆ ಕಳೆದ ಎರಡು ವರ್ಷದಿಂದ ನಿರಂತರವಾಗಿ ಪ್ರಾಕೃತಿಕ ವಿಕೋಪಕ್ಕೆ ತತ್ತರಿಸಿದ್ದು, ಈ ಹೊಡೆತ ನೇರವಾಗಿ ಜಿಲ್ಲೆಯ ಬೆಳೆಗಾರ ಸಮುದಾಯದ ಮೇಲೆ ಬಿದ್ದಿದೆ. ಇದರ ಹೊಡೆತದಿಂದ ಚೇತರಿಸಿಕೊಳ್ಳಲು ಇನ್ನು ಸಾಕಷ್ಟು ವರ್ಷಗಳೇ ಬೇಕಾಗಿದೆ. ಇಂತಹ ಸಮಯದಲ್ಲಿ ಕೋವಿಡ್ – 19 ಲಾಕ್‍ಡೌನ್ ನಿಂದ ಉಂಟಾಗಿರುವ ಹೊಡೆತ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಿದೆ.
ಕಾಫಿ ಉದ್ಯಮ ಮತ್ತು ಜಿಲ್ಲೆಯ ಎಲ್ಲಾ ಬೆಳೆಗಾರರು ಹಲವು ದಶಕಗಳಿಂದ ಅತೀವೃಷ್ಟಿ, ಅನಾವೃಷ್ಟಿ, ಪ್ರವಾಹ, ಭೂಕುಸಿತ, ಮಾರುಕಟ್ಟೆ ಕುಸಿತ, ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚ ಹೆಚ್ಚಳ, ಕಾರ್ಮಿಕರ ಸಮಸ್ಯೆಯಿಂದ ಸಂಕಷ್ಟದಲ್ಲಿದೆ. ಇದರೊಂದಿಗೆ ಕೋವಿಡ್ -19 ರ ದುಷ್ಪರಿಣಾಮದಿಂದ ಕಾಮಿ9ಕರ ಸಮಸ್ಯೆ ಉದ್ಭವಗೊಂಡಿದೆ.
ಬಹಳಷ್ಟು ಬೆಳೆಗಾರರ ಕಾಫಿ, ಕಾಳುಮೆಣಸು ಕಟಾವು ಸ್ಥಗಿತಗೊಂಡು ಪ್ರಸಕ್ತ ಬೆಳೆ ನಷ್ಟವಾಗಿದೆ. ಅದರ ಜೊತೆ ಕಾಫಿ, ಕಾಳುಮೆಣಸು ಬೆಳೆಗೆ ವ್ಯವಸ್ಥೆ ಇರುವಲ್ಲಿ ಸ್ಪಿಂಕ್ಲರ್ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ಸಕಾಲದಲ್ಲಿ ಮಳೆಯು ಆಗದೇ ಇರುವುದರಿಂದ ಮುಂದಿನ ವರ್ಷದ ಕೃಷಿ ಫಸಲು ಕುಂಠಿತಗೊಂಡಿದೆ. ಕೃಷಿ ಉತ್ಪನ್ನ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಈ ಸಮಸ್ಯೆಯಿಂದ ತೋಟದಲ್ಲಿ ಮತ್ತು ಮಿಶ್ರ ಬೆಳೆಗಳಲ್ಲಿ ಮುಂದಿನ ಫಸಲಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕಾಫಿ ಬೆಳೆಗಾರರ ಒಕ್ಕೂಟ ಮನವಿ ಸಲ್ಲಿಸಿದೆ.
ಕೊಡಗಿನ ಕಾಫಿ ಮತ್ತು ಇತರ ಎಲ್ಲಾ ಕೃಷಿ ಉತ್ತೇಜಿಸುವ ಪ್ಯಾಕೇಜ್‍ಗೆ ಮನವಿ. ಕೊಡಗಿನ ಎಲ್ಲಾ ಬೆಳೆಗಾರರು ಎಲ್ಲಾ ಬ್ಯಾಂಕ್‍ಗಳ ಹಣಕಾಸು ಸಂಸ್ಥೆಗಳ, ಖಾಸಗಿಯಾಗಿ ಪಡೆದಿರುವ ಎಲ್ಲಾ ರೀತಿಯ ಸಾಲಗಳ ಬಡ್ಡಿ ಮನ್ನಾ ಮಾಡಿ ಮುಂದೆ ಬಡ್ಡಿ ರಹಿತವಾಗಿ ವಿಸ್ತರಿಸಬೇಕು. ಸಾಲ ಮರುಪಾವತಿಗೆ ಯಾವುದೇ ಒತ್ತಡವನ್ನು ಹಾಕದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಶೂನ್ಯ ಬಡ್ಡಿ ದರದಲ್ಲಿ ರಹಿತರಿಗೆ ಸಹಕಾರ ಸಂಘದಲ್ಲಿ ಈಗಾಗಲೇ ನೀಡುತ್ತಿರುವ ಸಾಲ ಸೌಲಭ್ಯದ ಬಗ್ಗೆ ಪ್ರಸಕ್ತ ಹೊರಡಿಸಿರುವ ಸುತ್ತೋಲೆಯು ಅವೈಜ್ಞಾನಿಕವಾಗಿರುವುದರಿಂದ ಹಾಗೂ ಮರುಪಾವತಿಯ ವಿಧಾನ ಕ್ಲಿಷ್ಟಕರವಾಗಿರುವುದರಿಂದಲೂ ಈ ಸುತ್ತೋಲೆಯನ್ನು ಸರಕಾರ ಕೂಡಲೇ ಹಿಂಪಡೆದು ಈ ಹಿಂದಿನ ಸುತ್ತೋಲೆಯಂತೆ ಯಥಾಸ್ಥಿತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡುತ್ತೇವೆ. ಈ ಮೂಲಕ ಹೊಸ ಸಾಲ ವಿತರಣೆಗೆ ಉಂಟಾಗಿರುವ ಅಡೆತಡೆಯನ್ನು ನಿವಾರಿಸಲು ಮತ್ತು ತಕ್ಷಣ ಸಾಲ ಮಂಜೂರು ಮಾಡಲು ಅವಕಾಶ ಕಲ್ಪಿಸಬೇಕೆಂದು ಕೋರಿದ್ದಾರೆ.
ಕೊಡಗಿನಲ್ಲಿ ಪಾಳುಬಿಟ್ಟ ಕೃಷಿ ಭೂಮಿಗಳಲ್ಲಿ ಮರುಕೃಷಿ ಮಾಡಲು ಎಲ್ಲಾ ಬೆಳೆಗಾರರು ಉಸ್ತುಕತೆ ತೋರುತ್ತಿದ್ದಾರೆ. ಆದರೆ ಹಲವಾರು ಕಾರಣಗಳಿಂದ ಕೃಷಿ ಭೂಮಿಗಳನ್ನು ಪಾಳುಬಿಡುವಂತಾಗಿದೆ. ಇದಕ್ಕೆ ರೈತರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ ನೈಜ್ಯ ಕಾರಣಗಳನ್ನು ಪರಿಶೀಲನೆ ಮಾಡಿ ಈ ಸಮಸ್ಯೆ ನಿವಾರಿಸಿ ಸಕಾ9ರ ತಕ್ಷಣದಿಂದ ಕೃಷಿಗೆ ಉತ್ತೇಜನ ನೀಡಲು ವಿಶೇಷ ಪ್ಯಾಕೆಜ್ ರೂಪಿಸಬೇಕೆಂದು ಮನವಿ ಮಾಡಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಬೆಳೆದಂತಹ ಹಣ್ಣು, ಹಂಪಲು, ತರಕಾರಿ ಮತ್ತು ಬಾಳೆ (ಬಾಳೆಯಲ್ಲಿ ವಿಶೇಷವಾಗಿ ನೇಂದ್ರ ಬಾಳೆ ಕೃಷಿ) ನೆರೆ ರಾಜ್ಯವಾದ ಕೇರಳದ ಮಾರುಕಟ್ಟೆಯನ್ನು ಅವಲಂಬಿಸಿದೆ. ಆದರೆ ಜಿಲ್ಲೆಯ ಸಾವಿರಾರು ಬೆಳೆಗಾರರು ಬೆಳೆದ ಬಾಳೆಯನ್ನು ಲಾಕ್ಡೌನ್ನಿಂದ ಮಾರಾಟ ಮಾಡಲು ಸಾಧ್ಯವಾಗದೇ (ಕೇರಳ ಗಡಿ ಮುಚ್ಚಿರುವುದರಿಂದ) ಹಣ್ಣಾಗಿ ಉದುರುತ್ತಿದ್ದು, ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ನೇಂದ್ರ ಬಾಳೆ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಇಲ್ಲವೇ ಸಕಾ9ರವೇ ಕೂಡಲೇ ರೈತರ ಜಾಗಗಳಿಗೆ ತೆರಳಿ ಸೂಕ್ತ ಬೆಂಬಲ ಬೆಲೆಯೊಂದಿಗೆ ಖರೀದಿಸಬೇಕೆಂದು ಕಾಫಿ ಬೆಳೆಗಾರರ ಸಂಘ ಕೋರಿದೆ.
ನಿರಂತರ ಪ್ರಾಕೃತಿಕ ವಿಕೋಪ, ಅತೀವೃಷಿ, ಅನಾವೃಷ್ಟಿ, ವನ್ಯ ಪ್ರಾಣಿಗಳ ಹಾವಳಿಯಿಂಡ ಬೆಳೇ ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ಬೆಳೆಗಾರರ ಸಮುದಾಯದಲ್ಲಿ ಕೊಡಗಿನ ಸಣ್ಣ ಬೆಳೆಗಾರರು ಮತ್ತಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ನೈಜ್ಯ ಸಣ್ಣ ಬೆಳೆಗಾರರನ್ನು ಬಿಪಿಎಲ್ ಪಟ್ಟಿಗೆ ಸೇರಿಸಲು ಸಕಾ9ರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಕಾಫಿ ಮತ್ತು ಎಲ್ಲಾ ಕೃಷಿ ಚಟುವಟಿಕೆಗೆ ಅವಕಾಶ ಕಲ್ಪಿಸಬೇಕು. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೊಡ್ಡ, ಮದ್ಯಮ, ಸಣ್ಣ ಉದ್ಯಮಗಳಿಗೆ ಮತ್ತು ಇತರ ಚಟುವಟಿಕೆಗಳಿಗೆ ಕೋವಿಡ್ -19ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಉತ್ತೇಜನ ಪ್ಯಾಕೆಜ್ ಗಳನ್ನು ಘೋಷಿಸಿದ್ದು, ಕೊಡಗಿನ ಕಾಫಿ ಮತ್ತು ಇತರ ಎಲ್ಲಾ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಯಾವುದೇ ಪರಿಹಾರ ಘೋಷಣೆಯಾಗಿರುವುದಿಲ್ಲ. ಆದ್ದರಿಂದ ಕೂಡಲೇ ವಿಶೇಷ ಪ್ಯಾಕೇಜ್ ಮೂಲಕ ಆರ್ಥಿಕ ನೆರವು ಘೋಷಿಸಲು ವಿನಂತಿಸಲಾಗಿದೆ.
ಸಹಕಾರ ಸಂಘ ಮತ್ತು ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಬೆಳೆಗಾರರು ಹೊಂದಿರುವ ಸಾಲದ ಪ್ರಮಾಣದಲ್ಲಿ ಪ್ರತಿ ಎಕರೆಗೆ ಶೇ. 50 ರಷ್ಟು ದುಡಿಯುವ ಬಂಡವಾಳವಾಗಿ ಕೋವಿಡ್-19 ಉತ್ತೇಜನ ಹಣವಾಗಿ ಕೂಡಲೇ ಮಂಜೂರು ಮಾಡಬೇಕು. ಇದರಿಂದ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲು ಮತ್ತು ಕಾರ್ಮಿಕ ವೇತನ ಪಾವತಿಸಲು ಸಹಕಾರವಾಗಲಿದೆ. ಅಲ್ಲದೇ ಎಲ್ಲಾ ಬ್ಯಾಂಕ್ ಗಳು ಬೆಳೆಗಾರರಿಗೆ ಶೀಘ್ರವಾಗಿ ಹಾಗೂ ಸರಳ ವಿಧಾನದ ಮೂಲಕ ಹೊಸ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಗಿದೆ.
ಕೊಡಗಿನ ವಿವಿಧ ಬೆಳೆಗಾರರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ನಂದಾಬೆಳ್ಯಪ್ಪ ಕೆ.ಕೆ.ವಿಶ್ವನಾಥ್, ಎಂ.ಸಿ.ಕಾರ್ಯಪ್ಪ, ಎನ್.ಎಂ.ದಿನೇಶ್, ಸೋಮಶೇಖರ್ ಎಸ್.ಎನ್, ಬಿ.ಎಸ್.ಅನಂತರಾಮ್, ಮೋಹನ್ ಬೋಪಣ್ಣ, ಕೆ.ಎಸ್.ಅಪ್ಪಯ್ಯ, ಹರೀಶ್ ಅಪ್ಪಯ್ಯ, ಅಣ್ಣೀರ ಹರೀಶ್ ಮಾದಪ್ಪ, ಮಾಣೀರ ವಿಜಯ್ ನಂಜಪ್ಪ ಇತರರು ಹಾಜರಿದ್ದರು.