ಸಂಪಾಜೆ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಲು ಯುವ ಕಾಂಗ್ರೆಸ್ ಮನವಿ

08/05/2020

ಮಡಿಕೇರಿ ಮೇ 8 : ಕೊಡಗಿನ ಸಂಪಾಜೆ ಗಡಿಭಾಗದಲ್ಲಿ ವಾಸವಿರುವ ಕೂಲಿಕಾರ್ಮಿಕರು ಹಾಗೂ ಜನ ಸಾಮಾನ್ಯರು ಅನಿವಾರ್ಯ ಸಂದರ್ಭದಲ್ಲಿ ಹೋಗಿ ಬರಲು ಜಿಲ್ಲಾಡಳಿತ ಅವಕಾಶ ನೀಡಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ.ಹನೀಫ್ ಸಂಪಾಜೆ ಮನವಿ ಮಾಡಿದ್ದಾರೆ.
ಗಡಿಭಾಗದಲ್ಲಿರುವ ದೇವರಕೊಲ್ಲಿ, ಕೊಯನಾಡು, ಸಂಪಾಜೆ ಭಾಗದ ಕೂಲಿ ಕಾರ್ಮಿಕರು ಕಲ್ಲುಗುಂಡಿ, ಚೆಂಬು, ಪೆರಾಜೆ ಗ್ರಾಮಗಳಲ್ಲಿ ರಬ್ಬರ್ ಟ್ಯಾಪಿಂಗ್, ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರುಗಳು ಪ್ರತಿದಿನ ದುಡಿದರಷ್ಟೇ ಊಟ ಎನ್ನುವಂತಹ ಪರಿಸ್ಥಿತಿ ಇದೆ. ಆದರೆ ಲಾಕ್ ಡೌನ್ ಆದೇಶದಿಂದ ಗಡಿಭಾಗದಿಂದ ಪಕ್ಕದ ಊರುಗಳಿಗೆ ಕೆಲಸಕ್ಕೆ ತೆರಳಲು ಅಡಚಣೆಯಾಗಿದ್ದು, ಆರ್ಥಿಕ ಸಂಕಷ್ಟ ಎದುರಾಗಿದೆ.
ಆದ್ದರಿಂದ ಗಡಿಭಾಗದಲ್ಲಿರುವ ಶ್ರಮಿಕ ವರ್ಗಕ್ಕೆ ಅನಿವಾರ್ಯ ಪರಿಸ್ಥಿತಿಗಳಲ್ಲಿ ಚೆಕ್ ಪೋಸ್ಟ್ ಗಳ ಮೂಲಕ ಆಗಮನ ಮತ್ತು ನಿರ್ಗಮನಕ್ಕೆ ಅವಕಾಶ ನೀಡಬೇಕೆಂದು ಹನೀಫ್ ಜಿಲ್ಲಾಡಳಿತಕ್ಕೆ ನೀಡಿರುವ ಮನವಿ ಪತ್ರದಲ್ಲಿ ಕೋರಿಕೊಂಡಿದ್ದಾರೆ.