ಕೊಡಗಿನ ಗಡಿ ಗ್ರಾಮ ಪೆರಾಜೆಯಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ

09/05/2020

ಅತ್ತಿಗೆಯಿಂದ ಮೈದುನನ ಹತ್ಯೆ : ಪೆರಾಜೆಯಲ್ಲಿ ಘಟನೆ
ಮಡಿಕೇರಿ ಮೇ 9 : ಆಸ್ತಿ ವಿಂಗಡಣೆಯ ತಕರಾರಿನ ಹಿನ್ನಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೈದುನನನ್ನೇ ಕತ್ತಿಯಿಂದ ಕಡಿದು ಕೊಲೆಗೈದಿರುವ ಘಟನೆ ಕೊಡಗಿನ ಗಡಿಗ್ರಾಮ ಪೆರಾಜೆಯಲ್ಲಿ ನಡೆದಿದೆ. ಈ ಸಂಬಂಧ ಮಹಿಳೆ ಹಾಗೂ ಆಕೆಯ ಪುತ್ರನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೆರಾಜೆಯ ಪೀಚೆ ಎಂಬಲ್ಲಿನ ನಿವಾಸಿ ಉತ್ತರಕುಮಾರ ಎಂಬವರೇ ಅತ್ತಿಗೆ ತಾರಿಣಿ ಅವರಿಂದ ಹತ್ಯೆಗೊಳಗಾದವರಾಗಿದ್ದು, ಶುಕ್ರವಾರ ರಾತ್ರಿ ಈ ದುರ್ಘಟನೆ ನಡೆದಿದೆ.
ಪೀಚೆ ಮನೆಯ ತಾರಿಣಿ ಹಾಗೂ ಉತ್ತರಕುಮಾರ ಅವರ ಜಾಗ ಅಕ್ಕಪಕ್ಕದಲ್ಲಿದ್ದು, ಆಸ್ತಿ ವಿಂಗಡಣೆಗೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ತಕರಾರು ಇತ್ತೆನ್ನಲಾಗಿದೆ. ಶುಕ್ರವಾರ ರಾತ್ರಿ 12ಗಂಟೆ ಸುಮಾರಿಗೆ ಸ್ನೇಹಿತರೊಬ್ಬರ ಮನೆಗೆ ಹೋಗಿ ಬಂದ ಉತ್ತರಕುಮಾರ ಮನೆಯ ಪಕ್ಕದ ರಸ್ತೆಯಲ್ಲಿ ತನ್ನ ಬೈಕ್ ನಿಲ್ಲಿಸಿ ಅಕ್ಸಿಲೇಟರ್ ಕೊಟ್ಟು ಶಬ್ಧ ಮಾಡಿದರೆಂದು ಹೇಳಲಾಗಿದ್ದು, ಈ ಶಬ್ಧ ಕೇಳಿ ಹೊರಗೆ ಬಂದ ತಾರಿಣಿ ಹಾಗೂ ಅವರ ಪುತ್ರ ಉತ್ತರಕುಮಾರ ಅವರಿಗೆ ಬೈದರೆಂದು ಹೇಳಲಾಗಿದೆ. ತನಗೆ ಬೈದುದನ್ನು ಕೇಳಿಸಿಕೊಂಡ ಉತ್ತರಕುಮಾರ ಅವರೂ ಬೈಯ್ಯುತ್ತಾ ಮನೆ ಕಡೆಗೆ ತೆರಳಿದಾಗ ತಾರಿಣಿ ಮತ್ತು ಆಕೆಯ ಪುತ್ರ ಧರಣೀಧರ ಉತ್ತರಕುಮಾರ ಅವರಿಗೆ ಕತ್ತಿಯಿಂದ ಕಡಿದರು ಎನ್ನಲಾಗಿದೆ.
ತಾರಿಣಿ ಅವರ ಮನೆಗೆ ಹೋಗುವ ರಸ್ತೆಯಲ್ಲಿ ನಡೆದ ಈ ಘಟನೆಯಲ್ಲಿ ಗಾಯಗೊಂಡ ಉತ್ತರಕುಮಾರ ಅವರು ರಸ್ತೆಯಿಂದ ಜಾರಿ ಪಕ್ಕದ ತೋಟಕ್ಕೆ ಬಿದ್ದಿದ್ದು, ಅಲ್ಲಿಗೆ ತೆರಳಿದ ತಾರಿಣಿ ಮತ್ತು ಅವರ ಮಗ ಹಲವಾರು ಬಾರಿ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ಹೇಳಲಾಗಿದೆ.
ವಿಷಯ ತಿಳಿದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ಶನಿವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ಮಹಜರು ನಡೆಸುವುದರೊಂದಿಗೆ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.