ಪಾಂಡಂಡ ಕುಟ್ಟಪ್ಪ ನಿಧನಕ್ಕೆ ಕೊಡವ ಸಮಾಜಗಳ ಒಕ್ಕೂಟದ ಆಡಳಿತ ಮಂಡಳಿ ಸಂತಾಪ

09/05/2020

ಮಡಿಕೇರಿ ಮೇ 9 : ಕೊಡವ ಕೌಟುಂಬಿಕ ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ ಅವರ ನಿಧನಕ್ಕೆ ಕೊಡವ ಸಮಾಜಗಳ ಒಕ್ಕೂಟದ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಪಾಂಡಂಡ ಕುಟ್ಟಪ್ಪ ಅವರ ನಿಧನದಿಂದ ಕೊಡವ ಜನಾಂಗಕ್ಕೆ ತುಂಬಲಾರದ ನಷ್ಟವನ್ನುಂಟಾಗಿದೆ. ಹಾಕಿ ಪಂದ್ಯಾವಳಿ ಮೂಲಕ ಕೊಡವ ಜನಾಂಗದ ಒಗ್ಗಟ್ಟಿಗೆ ಹಾಗೂ ಸಾಮರಸ್ಯ ಮೂಡಿಸುವಲ್ಲಿ ಪಾಂಡಂಡ ಕುಟ್ಟಪ್ಪ ಯಶಸ್ವಿಯಾಗಿದ್ದರು. ಪಾಂಡಂಡಕುಟ್ಟಪ್ಪ ಹಾಕಿಯ ಜನಕ ಎಂದೇ ಖ್ಯಾತರಾದವರು. ಯುವಕರನ್ನು ಹಾಕಿ ಕ್ರೀಡೆಗೆ ಸೇರಿಸುವಲ್ಲಿ ಪಾಂಡಂಡಕುಟ್ಟಪ್ಪ ಅವರ ಪರಿಶ್ರಮ ಹೆಚ್ಚಿದೆ. ಅವರ ನಿಧನ ಕೊಡಗು ಜಿಲ್ಲೆಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು.
ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಪರಿಕಲ್ಪನೆಯನ್ನು ಬಿತ್ತಿ ಯಶಸ್ವಿಯಾಗಿ ಕಳೆದ 23 ವರ್ಷಗಳಿಂದ ಹಾಕಿ ನಮ್ಮೆ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕುಟ್ಟಪ್ಪ ಕೊಡವರ ಒಗ್ಗೂಡುವಿಕೆಗೆ ಸಾಕ್ಷಿಯಾಗಿದ್ದರು. ಸ್ಟೇಟ್ ಬ್ಯಾಂಕ್‍ಆಫ್‍ಇಂಡಿಯಾ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಕುಟ್ಟಪ್ಪ, ಪ್ರಥಮದರ್ಜೆ ಹಾಕಿ ಆಟದ ತೀರ್ಪುಗಾರರಾಗಿಯು ಕೆಲಸ ಮಾಡಿದ್ದರು. ಹಾಕಿಯ ತವರೂರು ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕೆಂದು ಆರಂಭವಾದ ಕೊಡವ ಕೌಟುಂಬಿಕ ಹಾಕಿ ಉತ್ಸವ ಇಂದು ಚರಿತ್ರೆ ಬರೆದಿದೆ. ವಿಶ್ವ ಮಟ್ಟದಲ್ಲಿ ಮಾನ್ಯತೆ ದೊರೆತಿದೆ. ಪ್ರತಿವರ್ಷ ಹಾಕಿ ಉತ್ಸವಕ್ಕಾಗಿ ಕಾಯುವಂತ ರೋಚಕತೆಯನ್ನು ಸೃಷ್ಠಿಸಿದ ಕುಟ್ಟಪ್ಪ ನಿಧನ ಕ್ರೀಡಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.