ಸಾಂಸ್ಥಿಕ ಸಂಪರ್ಕ ತಡೆಯಲ್ಲಿರುವುದು ಕಡ್ಡಾಯ

09/05/2020

ಮಡಿಕೇರಿ ಮೇ 8 : ಕೋವಿಡ್-19 ರ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರದಿಂದ ಹೊರಡಿಸಲಾದ ಹೊಸ ಮಾರ್ಗಸೂಚಿಯಂತೆ ಜಿಲ್ಲೆಗೆ ಹಿಂದಿರುಗುವ ಜನರು ಕಡ್ಡಾಯವಾಗಿ ಜಿಲ್ಲೆಯಲ್ಲಿನ ಸಾಂಸ್ಥಿಕ ಸಂಪರ್ಕ ತಡೆಯಲ್ಲಿರಬೇಕಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕರ್ನಾಟಕ ರಾಜ್ಯದಿಂದ ಅಧಿಸೂಚಿಸಿರುವಂತೆ ಹೆಚ್ಚಿನ ಅಪಾಯದ ಮಹರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳಿಂದ ಹಿಂತಿರುಗುವವರು, ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದವರಾಗಿದ್ದು, ಜಿಲ್ಲೆಗೆ ಹಿಂತಿರುಗುವವರು, ನಗರ ಪ್ರದೇಶದ ಜನಸಂದಣಿ ಪ್ರದೇಶ/ ಕಾಲೋನಿಗಳಲ್ಲಿ ವಾಸವಿದ್ದು, ಜಿಲ್ಲೆಗೆ ಹಿಂದಿರುಗುವವರು ಸಾಂಸ್ಥಿಕ ಸಂಪರ್ಕ ತಡೆಯಲ್ಲಿರಬೇಕಿದೆ.
ಕೊಡಗು ಜಿಲ್ಲೆಗೆ ಹಿಂದಿರುಗುವವರು ಕರ್ನಾಟಕದ ಸೇವಾ ಸಿಂಧು ಪೆÇೀರ್ಟಲ್ ಮೂಲಕ ಪಡೆದುಕೊಂಡ ಇ-ಪಾಸ್ ನ ಪ್ರತಿ ಮತ್ತು ಕೊಡಗು ಜಿಲ್ಲೆಯ ನಿವಾಸಿಗಳೆಂದು ಸಾಬೀತು ಪಡಿಸುವ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿರುವವರಿಗೆ ಮಾತ್ರ ಜಿಲ್ಲೆಯ ಗಡಿ ಭಾಗದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.
ಕೊಡಗು ಜಿಲ್ಲೆಗೆ ಕುಶಾಲನಗರ ಹತ್ತಿರದ ಕೊಪ್ಪ ಚೆಕ್‍ಪೆÇೀಸ್ಟ್ (ಮೈಸೂರು ಜಿಲ್ಲೆಯ ಸರಹದ್ದು) ಮತ್ತು ಸಂಪಾಜೆ ಚೆಕ್ ಪೆÇೀಸ್ಟ್ (ದಕ್ಷಿಣ ಕನ್ನಡ ಜಿಲ್ಲೆ ಸರಹದ್ದು) ಮೂಲಕ ಮಾತ್ರ ಪ್ರವೇಶ ಕಲ್ಪಿಸಲಾಗುವುದು.
ಜಿಲ್ಲೆಯಲ್ಲಿನ ಶಾಲೆಗಳು, ವಸತಿ ಶಾಲೆಗಳು, ಹಾಸ್ಟೆಲ್ ಗಳನ್ನು ಗುರುತಿಸಿ ಈ ಸ್ಥಳಗಳನ್ನು ಸಾಂಸ್ಥಿಕ ಸಂಪರ್ಕ ತಡೆಗೆ ಗೊತ್ತುಪಡಿಸಲು ತಹಶೀಲ್ದಾರರು, ತಾ.ಪಂ.ಇಒಗಳು, ನಗರಸಭೆ ಆಯುಕ್ತರು, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು, ಈ ಕಾರ್ಯದ ಮೇಲುಸ್ತುವಾರಿಯನ್ನು ನಿರ್ವಹಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.