ಕುಶಾಲನಗರದಲ್ಲಿ ಕಾವೇರಿ ನದಿ ನಿರ್ವಹಣೆ ಕಾಮಗಾರಿಗೆ ಮೇ 11 ರಂದು ಚಾಲನೆ

09/05/2020

ಮಡಿಕೇರಿ ಮೇ 9 : ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ನದಿ ತಟದ ಬಡಾವಣೆಗಳಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಕಾವೇರಿ ನದಿಯ ನಿರ್ವಹಣೆ ಕಾಮಗಾರಿಗೆ ಈ ತಿಂಗಳ 11 ರಿಂದ ಚಾಲನೆಗೊಳ್ಳಲಿದೆ.
ಕಳೆದ ಎರಡು ವರ್ಷಗಳಿಂದ ನದಿ ನೀರು ಪಟ್ಟಣದ ಹಲವು ಬಡಾವಣೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ಥಗೊಳ್ಳುವುದರೊಂದಿಗೆ ಮಡಿಕೇರಿ, ಕುಶಾಲನಗರ, ಮೈಸೂರು ರಾಷ್ಟ್ರೀಯ ಹೆದ್ದಾರಿ ಕೂಡ ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಈ ನಿಟ್ಟಿನಲ್ಲಿ ಕುಶಾಲನಗರ ಕಾವೇರಿ ನದಿ ಪ್ರವಾಹ ಸಂತ್ರಸ್ಥರ ವೇದಿಕೆ ಮೂಲಕ ನದಿಯ ನಿರ್ವಹಣೆಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು.
ಮನವಿಗೆ ಸ್ಪಂದಿಸಿದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕುಶಾಲನಗರದ ಕಾವೇರಿ ಸೇತುವೆ ಕೆಳಭಾಗ ಸೇರಿದಂತೆ ನಾಲ್ಕು ಕಡೆ ನದಿಯ ಹೂಳೆತ್ತುವುದು ಮತ್ತು ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ರು 88 ಲಕ್ಷದ ಯೋಜನೆಗೆ ಆಡಳಿತಾತ್ಮಕ ಅನುಮತಿ ನೀಡಿದ ಮೇರೆಗೆ ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿಗೆ ಅನುಮೋದನೆ ಕಲ್ಪಿಸಲಾಗಿದೆ.
ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕಾಮಗಾರಿಗೆ ಆದ್ಯತೆ ಕಲ್ಪಿಸಿ ತಕ್ಷಣ ಪ್ರಾರಂಭಿಸುವಂತೆ ಕೋರಿದ ಹಿನ್ನಲೆಯಲ್ಲಿ ನಿಗಮ ಯೋಜನೆಗೆ ಅನುದಾನ ಬಿಡುಗಡೆಗೊಳಿಸಿದೆ. ಸೋಮವಾರದಂದು ಕಾಮಗಾರಿಗೆ ಭೂಮಿಪೂಜೆ ನಡೆಯಲಿದೆ ಎಂದು ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ರಾಜೇಗೌಡ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಈ ತಿಂಗಳ 11 ರಂದು 9 ಗಂಟೆಗೆ ಕುಶಾಲನಗರ-ಕೊಪ್ಪ ಕಾವೇರಿ ಸೇತುವೆ ಕೆಳಭಾಗದಲ್ಲಿ ಕಾಮಗಾರಿಗೆ ಕ್ಷೇತ್ರ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಚಾಲನೆ ನೀಡಲಿದ್ದಾರೆ.