ಕೊಡಗಿನಲ್ಲಿ ಸಾಂಸ್ಥಿಕ ಸಂಪರ್ಕ ತಡೆ : ತವರಿಗೆ ಬಂದವರಿಗೆ ಬೇಸರ

10/05/2020

ಮಡಿಕೇರಿ ಮೇ 10 : ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾದ ಲಾಕ್‍ಡೌನ್ ಸಂದರ್ಭ ವಿವಿಧೆಡೆ ಸಿಲುಕಿಕೊಂಡಿದ್ದ ಜನರು ಇದೀಗ ಜಿಲ್ಲೆಗೆ ಮರಳುತ್ತಿದ್ದರೂ, ತವರಿಗೆ ಆಗಮಿಸಿದ ಖುಷಿ ಅವರಿಂದ ಮರೆಯಾಗುತ್ತಿದೆ.
ಮೇ 5ರ ನಂತರ ಹೊರ ರಾಜ್ಯಗಳಿಂದ ಬಂದಿರುವವರನ್ನು ಜಿಲ್ಲಾಡಳಿತ ಇದೀಗ ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಗಳಿಗೆ ರವಾನಿಸುತ್ತಿರುವುದೇ ಅವರಲ್ಲಿದ್ದ ಸಂತೋಷ ಮರೆಯಾಗಲು ಕಾರಣವಾಗಿದೆ.
ಇಲ್ಲಿಗೆ ಸಮೀಪದ ನೆಲ್ಯಹುದಿಕೇರಿ ಹಾಗೂ ವಾಲ್ನೂರು ಗ್ರಾಮಕ್ಕೆ ಆಗಮಿಸಿದ 5 ಮಹಿಳೆಯರು ಮತ್ತು 15 ಪುರುಷರು ಸೇರಿದಂತೆ 20 ಮಂದಿಯನ್ನು ಜಿಲ್ಲಾಡಳಿತ ಶನಿವಾರ ಸಾಂಸ್ಥಿಕ ಸಂಪರ್ಕ ತಡೆ ಹಿನ್ನೆಲೆಯಲ್ಲಿ ಬೇರೆಡೆಗೆ ಸ್ಥಳಾಂತರಿಸಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಕೈಗೊಂಡಿರುವ ಈ ನಿರ್ಧಾರ ಸ್ವಾಗತಾರ್ಹವಾಗಿದ್ದರೂ, ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದ ದಿಢೀರ್ ನಿರ್ಧಾರ ಸರಿಯಲ್ಲ. ಕ್ವಾರಂಟೈನ್‍ಗೆ ಸ್ಥಳಾಂತರ ಮಾಡಿದವರಲ್ಲಿ ಹಲವರು ಗ್ರಾಮಕ್ಕೆ ಬಂದು 5 ದಿನಗಳು ಕಳೆದಿವೆ. ಈ ಅವಧಿಯಲ್ಲಿ ಅವರು ಯಾವುದೇ ಅನಾರೋಗ್ಯಕ್ಕೆ ಒಳಗಾಗಿಲ್ಲ. ಕ್ವಾರಂಟೈನ್ ಸೀಲ್ ಹಾಕಿರುವ ಕಾರಣ ಎಲ್ಲರನ್ನೂ ಅವರ ಮನೆಗಳಲ್ಲಿ ಕ್ವಾರಂಟೈನ್‍ನಲ್ಲಿರಿಸಲಾಗಿತ್ತು. ಇದೀಗ ಆರೋಗ್ಯವಂತರನ್ನು ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿರುವವರೊಂದಿಗೆ ಇರಿಸುವುದು ಸರಿಯಲ್ಲ. ಇಲ್ಲಿ ಆರೋಗ್ಯವಂತರಾಗಿದ್ದವರು ಅಲ್ಲಿ ಅನಾರೋಗ್ಯಕ್ಕೆ ಒಳಗಾದರೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ನೆಲ್ಯಹುದಿಕೇರಿಯ ಅಶ್ರಫ್ ಅವರು ಮಾತನಾಡಿ, ಮನೆಯಲ್ಲಿ ಸಂಪರ್ಕ ತಡೆಯಲ್ಲಿದ್ದವರನ್ನು ಜಿಲ್ಲಾಡಳಿತ ಏಕಾಏಕಿ ಕ್ವಾರಂಟೈನ್ ಸಲುವಾಗಿ ಕುಶಾಲನಗರಕ್ಕೆ ಸ್ಥಳಾಂತರ ಮಾಡುತ್ತಿದೆ. ಹೋಂ ಕ್ವಾರಂಟೈನ್‍ಗೆಂದು ಬಂದ ವಯೋವೃದ್ಧರು ಹಾಗೂ ಪುಟಾಣಿ ಮಕ್ಕಳನ್ನು ಸ್ಥಳಾಂತರಿಸುವ ಮೂಲಕ ಜಿಲ್ಲಾಡಳಿತವು ತಪ್ಪು ಮಾಡುತ್ತಿದೆ. ಜಿಲ್ಲಾಡಳಿತ ಅನುಮತಿ ನೀಡಿದಲ್ಲಿ ನಮ್ಮ ಗ್ರಾಮದವರನ್ನು ಸ್ಥಳೀಯ ಶಾಲೆ, ಮಸೀದಿಗಳಲ್ಲಿ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.