ಮಡಿಕೇರಿ ರಸ್ತೆಗಳ ದುರಸ್ತಿಗೆ ಮಹಿಳಾ ಜೆಡಿಎಸ್ ಒತ್ತಾಯ

11/05/2020

ಮಡಿಕೇರಿ ಮೇ 11 : ಮಡಿಕೇರಿ ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ತಕ್ಷಣ ನಗರಸಭೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಜಾತ್ಯಾತೀತ ಜನತಾದಳದ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ ಒತ್ತಾಯಿಸಿದ್ದಾರೆ. ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು ತೆರಳುವ ರೇಸ್ ಕೋರ್ಸ್ ರಸ್ತೆ ಹಾಗೂ ಭಗವತಿ ನಗರದ ರಸ್ತೆಗಳನ್ನು ತುರ್ತಾಗಿ ಡಾಂಬರೀಕರಣಗೊಳಿಸಬೇಕು.
ಇಲ್ಲದಿದ್ದಲ್ಲಿ ಮಳೆಗಾಲದಲ್ಲಿ ರಸ್ತೆಯ ಹೊಂಡ, ಗುಂಡಿಗಳು ಕೆಸರುಮಯವಾಗಿ ಪಾದಾಚಾರಿಗಳ ಸಂಚಾರಕ್ಕೆ ಅಡಚಣೆಯಾಗಲಿದೆ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳು ಈಗಾಗಲೇ ಕಾಮಗಾರಿಗಳನ್ನು ನಡೆಸಲು ಅವಕಾಶ ಕಲ್ಪಿಸಿದ್ದರೂ ನಗರಸಭೆ ಮಾತ್ರ ಯಾವುದೇ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದ್ದಾರೆ.
ಪೌರಯುಕ್ತರು ನಿವೃತ್ತಿ ಹಂತದಲ್ಲಿದ್ದು, ಈ ಸಂದರ್ಭದಲ್ಲಾದರೂ ಉತ್ತಮ ಕಾರ್ಯ ಮಾಡಲಿ ಎಂದು ಅವರು ಮನವಿ ಮಾಡಿದ್ದಾರೆ.