ಒಂದೇ ದಿನ 54 ಮಂದಿಗೆ ಸೋಂಕು

11/05/2020

ಬೆಂಗಳೂರು ಮೇ 10 : ರಾಜ್ಯದಲ್ಲಿ ಮಹಾಮಾರಿ ಕೊರೋನಾವೈರಸ್ ಆರ್ಭಟ ಮುಂದುವರೆದಿದೆ. ಇಂದು ಹೊಸದಾಗಿ 54 ಜನರಲ್ಲಿ ಕೊರೋನಾವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆ ಆಗಿದೆ. ಈ ಪೈಕಿ 31 ರೋಗಿಗಳು ಮೃತಪಟ್ಟಿದ್ದು, 422 ಜನ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿದೆ.
ಕೋವಿಡ್- 19 ಪೀಡಿತ ಒಟ್ಟು 394 ರೋಗಿಗಳಲ್ಲಿ 388 ರೋಗಿಗಳು ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಹಾಗೂ 06 ವ್ಯಕ್ತಿಗಳನ್ನು ಐಸಿಯುನಲ್ಲಿ ಇಡಲಾಗಿದೆ.
ಬೆಂಗಳೂರು ನಗರದಲ್ಲಿ 3, ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ 7, ಕಲಬುರಗಿಯಲ್ಲಿ 4, ಬೆಳಗಾವಿಯಲ್ಲಿ 22, ಚಿಕ್ಕಬಳ್ಳಾಪುರ , ದಾವಣಗೆರೆಯಲ್ಲಿ ತಲಾ 1, ಶಿವಮೊಗ್ಗ 8, ಬಾಗಲಕೋಟೆಯಲ್ಲಿ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.