ಸರ್ಕಾರದ ವಿರುದ್ಧ ರಜನಿ ಅಸಮಾಧಾನ

11/05/2020

ಚೆನ್ನೈ ಮೇ 10 : ತಮಿಳು ನಾಡಿನಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವುದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಮದ್ಯದಂಗಡಿಗಳನ್ನು ತೆರೆಯಲು ಆಡಳಿತಾರೂಢ ಎಐಎಡಿಎಂಕೆ ಅನುಮತಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಮುಂದಿನ ವರ್ಷದ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುವುದು ಬೇಡ ಎಂದಿದ್ದಾರೆ.
ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಸರ್ಕಾರಕ್ಕೆ ಆದಾಯ ಬರಲು ಬೇರೆ ಬದಲಿ ದಾರಿಗಳನ್ನು ಹುಡುಕಿಕೊಳ್ಳಬೇಕಾಗಿತ್ತು ಎಂದಿದ್ದಾರೆ.
ರಾಜ್ಯದಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಿ ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆ ನೀಡುವಂತೆ ಕೋರಿ ತಮಿಳು ನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಸಂದರ್ಭದಲ್ಲಿ ರಜನಿಕಾಂತ್ ಟ್ವೀಟ್ ಮೂಲಕ ಹೀಗೆ ಹೇಳಿದ್ದಾರೆ.