ವಲಸೆ ಕಾರ್ಮಿಕರ ಅಸಮಾಧಾನ : ಕೊಡಗು ಜಿಲ್ಲಾಡಳಿತ ಸ್ಪಷ್ಟನೆ

11/05/2020

ಮಡಿಕೇರಿ ಮೇ 11 :  ಬೇರೆ ರಾಜ್ಯದಿಂದ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದು ಜಿಲ್ಲೆಯ ತೋಟಗಳಲ್ಲಿ, ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರಲ್ಲಿ ಅವರವರ ಸ್ವಂತ ಊರುಗಳಿಗೆ ತೆರಳಲು ಸಾಧ್ಯವಾಗದಿರುವ ಬಗ್ಗೆ ಅಶಾಂತಿ, ಗೊಂದಲ ಉಂಟಾಗಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ಪೈಕಿ ಕೆಲವು ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಲು ಮುಂದಾಗಿದ್ದು, ಜಿಲ್ಲಾಡಳಿತವು ಸೂಕ್ಷ್ಮವಾಗಿ ತಿಳಿಸಿ, ಅಂತಹ ನಿರ್ಧಾರವನ್ನು ಕೈ ಬಿಡಲು ಮನವೊಲಿಸಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸ್ವಂತ ಊರುಗಳಿಗೆ ತೆರಳಲು ಬಯಸುವ ಬೇರೆ ರಾಜ್ಯಗಳ ಕಾರ್ಮಿಕರು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ ನಲ್ಲಿ ಸಂಬಂಧಪಟ್ಟ ಪಂಚಾಯತಿಗಳ ಮೂಲಕ ನೋಂದಣಿ ಮಾಡಿಕೊಳ್ಳಲು ಕೋರಿದೆ.

ಸಂಬಂಧಪಟ್ಟ ರಾಜ್ಯಗಳಿಂದ ಅನುಮತಿ ಬಂದ ಕೂಡಲೇ ಪ್ರಯಾಣದ ಯೋಜನೆ ಬಗ್ಗೆ ಜಿಲ್ಲಾಡಳಿತದಿಂದ ಅವರಿಗೆ ಮಾಹಿತಿ ನೀಡಲಾಗುವುದು ಮತ್ತು ಪಾವತಿ ಆಧಾರದ ಮೇಲೆ ಜಿಲ್ಲಾಡಳಿತದಿಂದ ರಾಜ್ಯದಲ್ಲಿನ ಪಿಕ್ ಅಪ್ ಸ್ಥಳಗಳಿಗೆ ಕಾರ್ಮಿಕರನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು.

ತೋಟದ ಮಾಲೀಕರು, ಗುತ್ತಿಗೆದಾರರು ಅಥವಾ ಯಾರಾದರೂ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಹೋಗಲು ಪ್ರೇರೇಪಿಸಿದಲ್ಲಿ, ಅದನ್ನು ಗಂಭೀರವಾಗಿ ಪರಿಗಣಿಸಿ, ಅವರ ಮೇಲೆ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.