ಸುಂಟಿಕೊಪ್ಪದಲ್ಲಿ ಗುಂಪು ಘರ್ಷಣೆ : ಹತ್ತುಮಂದಿ ವಿರುದ್ಧ ಪ್ರಕರಣ ದಾಖಲು

11/05/2020

ಮಡಿಕೇರಿ ಮೇ 11 : ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಘರ್ಷಣೆ ಏರ್ಪಟ್ಟು 10 ಮಂದಿ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಇನ್ನಿತರರು ತಲೆಮರೆಸಿಕೊಂಡಿದ್ದಾರೆ.
ಸುಂಟಿಕೊಪ್ಪದ 2ನೇ ವಿಭಾಗದ ಚೆಸ್ಕಾಂ ಕಚೇರಿ ಬಳಿಯಲ್ಲಿ 3 ದಿನಗಳ ಹಿಂದೆ ಬೈಕ್ ರಿಪೇರಿ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿತ್ತು. ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿ ರಾಜಿ ತೀರ್ಮಾನವಾಗಿತ್ತು ಎನ್ನಲಾಗಿದೆ.
ಆದರೆ ಭಾನುವಾರ ಇದೇ ಎರಡು ಗುಂಪು ಮಧ್ಯಾಹ್ನ ವೇಳೆ ಚೆಸ್ಕಾಂ ಇಲಾಖೆ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘರ್ಷಣೆಯಲ್ಲಿ ತೊಡಗಿದ್ದು, ಕೆಲ ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.
ಸ್ಥಳಕ್ಕೆ ಪೊಲೀಸ್ ಠಾಣೆಯ ಎಎಸ್‍ಐ ಕಾವೇರಪ್ಪ, ಪೇದೆ ಪುಟ್ಟರಾಜು ತೆರಳಿ ಗುಂಪನ್ನು ಚದುರಿಸಿದ್ದು, ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದ 10 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ನಾಸೀರ್, ಸಿಸಾರ್, ಆಯುಬ್, ಲತೀಫ್ ಇವರುಗಳನ್ನು ಬಂಧಿಸಿದ್ದಾರೆ. ಉಳಿದ 6 ಮಂದಿ ತಲೆಮರೆಸಿಕೊಂಡಿದ್ದಾರೆ.