ಕೊರೋನಾ ಸಂಕಷ್ಟ : ಉಚಿತ ಪ್ರವೇಶಾತಿಗೆ ಮುಂದಾದ ಕ್ರೆಸೆಂಟ್ ಶಾಲೆ

12/05/2020

ಮಡಿಕೇರಿ ಮೇ 11 : ಕೊರೋನಾ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ನಗರದ ಕ್ರೆಸೆಂಟ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‍ಕೆಜಿ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ ಸಂಪೂರ್ಣ ಉಚಿತ ಪ್ರವೇಶಾತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿಜಾಮುದ್ದೀನ್ ಸಿದ್ದಿಕ್ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿ ಹೋಗಿದ್ದು, ಸ್ವಲ್ಪ ಚೇತರಿಕೆ ಕಂಡುಕೊಳ್ಳುವ ಸಂದರ್ಭ “ಕೊರೋನಾ” ಛಾಯೆ ನಮ್ಮ ದೇಶವನ್ನು ಆವರಿಸಿ ಲಾಕ್‍ಡೌನ್ ನಲ್ಲಿ ಇರುವಂತಹ ಪರಿಸ್ಥಿತಿ ಬಂದೊದಗಿದೆ. ಇದರಿಂದ ಜಿಲ್ಲೆಯ ಜನ ಕೂಡ ಕಠಿಣ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಶಾಲಾ ಆಡಳಿತ ಮಂಡಳಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‍ಕೆಜಿ ವಿದ್ಯಾರ್ಥಿಗಳನ್ನು ಉಚಿತವಾಗಿ ದಾಖಲಿಸಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಅಲ್ಲದೆ ಇತರ ವಿದ್ಯಾರ್ಥಿಗಳ ಪ್ರೇವೇಶಾತಿ ಶುಲ್ಕದಲ್ಲಿ ಶೇ 50 ರಷ್ಟು ಕಡಿತವನ್ನು ಮಾಡಲಾಗುವುದು ಎಂದು ಹೇಳಿದ್ದಾರೆ. ಕ್ರೆಸೆಂಟ್ ಶಾಲಾ ಅಧ್ಯಾಪಕರುಗಳು ತಮ್ಮ ವೇತನದಲ್ಲಿ ಶೇ 25 ರಷ್ಟು ಕಡಿತಗೊಳಿಸಿ ಸೇವೆ ಸಲ್ಲಿಸುವುದಾಗಿ ಸ್ವಯಂ ನಿರ್ಣಯಕೈಗೊಂಡಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ.
ಕೇಂದ್ರೀಯ ಮಾದರಿ ಪಠ್ಯಕ್ರಮವನ್ನು ಅನುಸರಿಸಿ ಶಿಕ್ಷಣ ರಂಗದಲ್ಲಿ ಉತ್ಕೃಷ್ಟ ಸೇವೆಯನ್ನು ಸಲ್ಲಿಸುತ್ತಾ, ಅನುಭವಿ ಅಧ್ಯಾಪಕರುಗಳ ಕಠಿಣ ಪರಿಶ್ರಮ ಮತ್ತು ಶಾಲಾ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಯಿಂದ ಶಾಲೆ 28 ವರ್ಷಗಳನ್ನು ಪೂರೈಸಿದೆ. ಪಾಠ, ಪ್ರವಚನದ ಜೊತೆಗೆ ವಿಜ್ಞಾನ, ಕಲೆ, ಕ್ರೀಡೆ ಹಾಗೂ ಇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದೆ. ಅಲ್ಲದೆ ಇಲ್ಲಿಯ ವಿದ್ಯಾರ್ಥಿಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆತು ಅನೇಕ ಗೌರವಯುತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ತಮ್ಮದೇ ಆದ ರೀತಿಯ ಕಾಣಿಕೆಯನ್ನು ನೀಡುತ್ತಲಿರುವುದು ಶಾಲೆಯ ಹಿರಿಮೆ ಎಂದು ನಿಜಾಮುದ್ದೀನ್ ಸಿದ್ದಿಕ್ ತಿಳಿಸಿದ್ದಾರೆ.