ಕೇರಳ ಕರಿಕೆ ಸಂಪರ್ಕ ರಸ್ತೆಗೆ ಮಣ್ಣು ಹಾಕಿ ಬಂದ್

12/05/2020

ಮಡಿಕೇರಿ ಮೇ 11 : ಅಂತರ್ ರಾಜ್ಯ ಸಂಪರ್ಕ ರಸ್ತೆ ಬಂದ್ ಆಗಿದ್ದರೂ ಪರ್ಯಾಯ ಮಾರ್ಗದಿಂದ ಅಕ್ರಮವಾಗಿ ಜನರು ಬಂದು ಹೋಗುತ್ತಿದ್ದ ಕಾರಣ ಈ ಮಾರ್ಗವನ್ನು ಕರಿಕೆ ಗ್ರಾ.ಪಂ ವತಿಯಿಂದ ಬಂದ್ ಮಾಡಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಸಂಪರ್ಕ ರಸ್ತೆ ಬಂದ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ ಪರಿಣಾಮ ಕರಿಕೆ ಅಂತರ್ ರಾಜ್ಯ ಗಡಿಯಲ್ಲಿ ಮಣ್ಣು ಸುರಿದು ರಸ್ತೆ ಬಂದ್ ಮಾಡಿ ಚೆಕ್ ಪೋಸ್ಟ್ ಅಳವಡಿಸಿ ಬಿಗಿ ಪೋಲೀಸ್ ಭದ್ರತೆ ಮಾಡಲಾಗಿತ್ತು. ಆದರೆ ಕೊಡಗು ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗಡಿ ಕೇರಳ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗೇರು ಪ್ಲಾಂಟೇಷನ್ ಗಾಗಿ ಹಾದುಹೋಗಿ ಪಾಣತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೇರಳದಲ್ಲಿ ಗೇಟ್ ಇದ್ದರೂ ಕೂಡ ಮಂಙನಡ್ಕ ರಸ್ತೆ ಮೂಲಕ ಕದ್ದು ಮುಚ್ಚಿ ನಿಂತರವಾಗಿ ವಾಹನ ಓಡಾಡುವುದು ಹಾಗೂ ಕಳ್ಳ ಭಟ್ಟಿ ಸಾರಾಯಿ ಸಾಗಿಸುತ್ತಿದ್ದಿದ್ದನ್ನು ಪತ್ತೆ ಹಚ್ಚಿ ಈ ಮೊದಲು ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆಗೆ ಮರದ ದಿಮ್ಮಿಗಳನ್ನು ಹಾಕಿ ಮುಚ್ಚಲಾಗಿತ್ತು.
ಆದರೆ ಇದೀಗ ಅದನ್ನು ತೆರವುಗೊಳಿಸಿ ವಾಹನ ಸಂಚರಿಸುವುದನ್ನು ಗಮನಿಸಿದ ಕರಿಕೆ ಗ್ರಾಮ ಪಂಚಾಯಿತಿ ವತಿಯಿಂದ ಸದರಿ ರಸ್ತೆಗೆ ಜೆಸಿಬಿ ಯಂತ್ರ ದ ಮೂಲಕ ರಸ್ತೆ ಗೆ ಮಣ್ಣು ಸುರಿದು ಸಂಪೂರ್ಣವಾಗಿ ಬಂದ್ ಮಾಡಲಾಯಿತು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ನೋಡಲ್ ಅಧಿಕಾರಿ ಜಗನ್ನಾಥ್, ಅಭಿವೃದ್ಧಿ ಅಧಿಕಾರಿ ಬಿಪಿನ್, ಕರಿಕೆ ಉಪಠಾಣಾಧಿಕಾರಿ ಮೋಹನ್, ಸಿಬ್ಬಂದಿ ಗೋವಿಂದ ಹಾಜರಿದ್ದರು.