ಮಿತಿ ಮೀರಿದ ವನ್ಯಜೀವಿಗಳ ಹಾವಳಿ : ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

May 12, 2020

ಮಡಿಕೇರಿ ಮೇ.11 : ಕೊಡಗು ಜಿಲ್ಲೆಯ ವಿವಿಧೆಡೆ ಹುಲಿ, ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ ಮಿತಿ ಮೀರಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕೊಡಗಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅರಣ್ಯ ಅಧಿಕಾರಿಗಳೊಂದಿಗಿನ ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳ ಬಗ್ಗೆ ಸಾರ್ವನಿಕರು ಬೆಳಕು ಚೆಲ್ಲಿದರು.
ವೀರಾಜಪೇಟೆ ತಾಲೂಕಿನ ಹಾಡಿಯ ರಾಜ ಎಂಬುವವರು ಕರೆ ಮಾಡಿ, ದಕ್ಷಿಣ ಕೊಡಗಿನ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಳವಿದ್ದು ಸೋಲಾರ್ ಬೇಲಿ ಅಳವಡಿಸುವಂತಾಗಬೇಕು ಎಂದು ಮನವಿ ಮಾಡಿದರು.
ಈ ಕುರಿತು ಮಾಹಿತಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು ಅವರು, ಇದು ಆನೆಚೌಕೂರು ವೈಲ್ಡ್‍ಲೈಫ್ ಭಾಗಕ್ಕೆ ಸೇರಿದ್ದಾಗಿದ್ದು, ಸಂಬಂಧಪಟ್ಟ ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಕ್ರಮವಹಿಸಲಾಗುವುದು ಎಂದರು.
ವಿರಾಜಪೇಟೆ ತಾಲೂಕಿನ ಮೈತಾಡಿಯಿಂದ ಲಿಂಗಪ್ಪ ಅವರು ಕರೆಮಾಡಿ, ಕಾಡಾನೆ ಹಾವಳಿಯಿಂದಾಗಿ ಬೆಳೆ ನಷ್ಟವಾಗಿದ್ದು, ಬೆಳೆ ಪರಿಹಾರ ತಲುಪಿಲ್ಲ ಎಂದು ತಿಳಿಸಿದರು.
ಆರ್‍ಎಫ್‍ಒ ದಿಲೀಪ್ ಅವರು ಉತ್ತರಿಸಿ ಈ ಸಂಬಂಧ ಅರಣ್ಯ ಇಲಾಖೆಯ ಕಚೇರಿಗೆ ಒಮ್ಮೆ ಭೇಟಿ ನೀಡಿ ಪರಿಶೀಲಿಸುವಂತೆ ಸಲಹೆ ನೀಡಿದರು.
ವಿರಾಜಪೇಟೆಯ ಬಾಡಗ ಗ್ರಾಮದಿಂದ ಕರೆ ಮಾಡಿದ್ದ ಮಾದಪ್ಪ ಮತ್ತು ಚಂಗಪ್ಪ ಎಂಬುವವರು ತಮ್ಮ ತೋಟದಲ್ಲಿ ಅಧಿಕ ನೆರಳಿರುವ ಮರಗಳನ್ನು ಕತ್ತರಿಸುವಂತೆ ಈ ಹಿಂದೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಕ್ರಮವಹಿಸುವಂತೆ ಕೋರಿದರು.
ಎಸಿಎಫ್ ಕೆ.ಎ.ನೆಹರು ಅವರು ಮಾಹಿತಿ ನೀಡಿ ತಿತಿಮತಿ ಭಾಗದಲ್ಲಿ ಸೇರಿದ್ದಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯಿಂದ ನಿವೃತ್ತ ಪ್ರಾಧ್ಯಾಪಕರಾದ ಸರೋಜಿನಿ ಅವರು ಕರೆ ಮಾಡಿ, ಮಳೆಗಾಲದಲ್ಲಿ ತೋಟದಲ್ಲಿ ಕೆಲವು ಮರಗಳು ಬಿದ್ದಿದ್ದು, ಅವುಗಳ ವಿಲೇವಾರಿ ಮಾಡಬೇಕಿದೆ ಎಂದು ಕೋರಿದರು.
ಎಸಿಎಫ್ ಕೆ.ಎ ನೆಹರು ಅವರು ಶೀಘ್ರ ಸಿಬ್ಬಂದಿಗಳನ್ನು ತೋಟದ ಸ್ಥಳಕ್ಕೆ ಕಳುಹಿಸಿ ಮರಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪೊನ್ನಂಪೇಟೆಯಿಂದ ವ್ಯಕ್ತಿಯೊಬ್ಬರು ಕರೆ ಮಾಡಿ, ಪೊನ್ನಂಪೇಟೆ ಪೊಲೀಸ್ ಠಾಣೆ ಮುಂಭಾಗ ಅಪಾಯಕಾರಿ ಮರವೊಂದಿದೆ, ಶೀಘ್ರವೇ ವಿಲೇವಾರಿ ಮಾಡುವಂತೆ ಮನವಿ ಮಾಡಿದರು.
ಎಸಿಎಫ್ ಕೆ.ಎ ನೆಹರು ಅವರು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೆಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ನೋಡಲ್ ಅಧಿಕಾರಿ ಶ್ರೀನಿವಾಸ್, ಮಡಿಕೇರಿ ವನ್ಯಜೀವಿ ವಿಭಾಗದ ಎಸಿಎಫ್ ದಯಾನಂದ, ವಿರಾಜಪೇಟೆ ಡಿಆರ್‍ಎಫ್‍ಒ ಸಚಿನ್ ಇತರರು ಹಾಜರಿದ್ದರು.

error: Content is protected !!