ಹೊರ ರಾಜ್ಯದಿಂದ ಬಂದವರಿಗೆ ಸಾಂಸ್ಥಿಕ ಸಂಪರ್ಕ ತಡೆ ಕಡ್ಡಾಯ

12/05/2020

ಮಡಿಕೇರಿ ಮೇ.11 : ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ, ಹೊರ ರಾಜ್ಯಗಳಿಂದ ಜಿಲ್ಲೆಗೆ ಮರಳುವವರು 14 ದಿನಗಳ ಕಾಲ ಸಾಂಸ್ಥಿಕ ಸಂಪರ್ಕ ತಡೆಯಲ್ಲಿರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸಾಂಸ್ಥಿಕ ಸಂಪರ್ಕ ಸಂಪರ್ಕ ತಡೆಯಲ್ಲಿರುವವರ ಗಂಟಲು ದ್ರವ ಮಾದರಿಯನ್ನು 14ನೇ ದಿನದಂದು ತೆಗೆದು ಪರೀಕ್ಷೆಗೆ ಕಳುಹಿಸಲಾಗುವುದು. ಪ್ರಯೋಗಾಲಯ ಪರೀಕ್ಷೆಯ ಫಲಿತಾಂಶ ಬರುವವರೆಗೂ ಸಾಂಸ್ಥಿಕ ಸಂಪರ್ಕ ತಡೆಯಲ್ಲಿರಬೇಕಾಗಿರುತ್ತದೆ.
ಸಾಂಸ್ಥಿಕ ಸಂಪರ್ಕ ಸಂಪರ್ಕ ತಡೆ ಸೌಲಭ್ಯವನ್ನು ಕಲ್ಪಿಸಲು ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ಹಾಸ್ಟೆಲ್‍ಗಳು ಮತ್ತು ವಸತಿ ಶಾಲೆಗಳನ್ನು ಗುರುತಿಸಿ ಅಧಿಸೂಚಿಸಲಾಗಿರುತ್ತದೆ. ಈ ರೀತಿಯ ಹಾಸ್ಟೆಲ್‍ಗಳು ಮತ್ತು ವಸತಿ ಶಾಲೆಗಳಲ್ಲಿ ಸಂಪರ್ಕ ತಡೆ ಮಾಡಿರುವವರಿಗೆ ಊಟ ಮತ್ತು ವಸತಿಯನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು.
ಇದರೊಂದಿಗೆ 13 ಹೊಟೇಲ್‍ಗಳನ್ನು ಸಾಂಸ್ಥಿಕ ಸಂಪರ್ಕ ತಡೆಗಾಗಿ ಗುರುತಿಸಲಾಗಿದ್ದು, ಗುರುತಿಸಲ್ಪಟ್ಟ ಹೊಟೇಲ್ ಗಳಲ್ಲಿ ಸಂಪರ್ಕ ತಡೆಯಲ್ಲಿರುವವರು ಊಟ ಮತ್ತು ವಸತಿಯ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.