ಪೂಜೆ, ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಒತ್ತಾಯ

ಮಡಿಕೇರಿ ಮೇ 12 : ಕೊರೋನಾ ಲಾಕ್‍ಡೌನ್ ಜಾರಿಯ ನಡುವೆಯೇ ಅನೇಕ ಕ್ಷೇತ್ರಗಳಿಗೆ ವಿನಾಯಿತಿ ನೀಡಿದ್ದು, ಇದೇ ಪ್ರಕಾರವಾಗಿ ದೇವಾಲಯ, ಮಸೀದಿ, ಚರ್ಚ್ ಸೇರಿದಂತೆ ಇತರ ಪ್ರಾರ್ಥನಾ ಮಂದಿಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ವಿ.ಕೆ.ಸತೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮದ್ಯದ ಅಂಗಡಿ, ಬಾರ್, ಕ್ಲಬ್, ಪಬ್ ಗಳನ್ನು ಕೂಡ ತೆರೆಯಲು ಅವಕಾಶ ನೀಡಿರುವ ಸರ್ಕಾರ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಯಾಕೆ ಅವಕಾಶ ನೀಡುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ.
ಶಾಂತಿ ಮತ್ತು ನೆಮ್ಮದಿಯನ್ನು ಕದಡುವ ಮದ್ಯದಂಗಡಿಗೆ ಅವಕಾಶ ನೀಡಿರುವಾಗ ಆತ್ಮತೃಪ್ತಿ ನೀಡುವ ದೇವಾಲಯ, ಮಂದಿರ, ಮಸೀದಿ, ಚರ್ಚ್‍ಗಳಿಗೆ ಪ್ರವೇಶಿಸಲು ಅವಕಾಶ ನೀಡದಿರುವುದು ಎಷ್ಟು ಸರಿ ಎಂದು ಗಮನ ಸೆಳೆದಿದ್ದಾರೆ.
ಎಲ್ಲಾ ವ್ಯಾಪಾರ, ವಹಿವಾಟು, ಬ್ಯಾಂಕ್ ವ್ಯವಹಾರಗಳಿಗೆ ಅವಕಾಶ ನೀಡಲಾಗಿದೆ. ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಚಾರವನ್ನು ಕೂಡ ಆರಂಭಿಸಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ ಧಾರ್ಮಿಕ ಕ್ಷೇತ್ರಗಳ ಮೇಲೆ ಮಾತ್ರ ಇನ್ನೂ ಹಿಡಿತವನ್ನು ಸಾಧಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಸತೀಶ್ ಕುಮಾರ್, ಹಸಿರ ವಲಯದಲ್ಲಿರುವ ಕೊಡಗಿನಲ್ಲಿ ಷರತ್ತು ಬದ್ಧವಾಗಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.