ಕಾಫಿ ಉದ್ಯಮಿಯ ಅನುಮಾನಾಸ್ಪದ ಸಾವು : ಕುಶಾಲನಗರದಲ್ಲಿ ಘಟನೆ

12/05/2020

ಮಡಿಕೇರಿ ಮೇ 12 : ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಫಿ ಉದ್ಯಮಿಯೋರ್ವ ಮೃತಪಟ್ಟಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಶ್ರೀಮಂಗಲದ ಕಾಕೂರು ಗ್ರಾಮದ ನಿವಾಸಿ ಕಲ್ಲಂಗಡ ಪೂವಪ್ಪ ಅಲಿಯಾಸ್ ಪ್ರವೀಣ್ (42) ಮೃತಪಟ್ಟಿರುವ ವ್ಯಕ್ತಿ.
ಮೂರು ತಿಂಗಳ ಹಿಂದೆ ಕುಶಾಲನಗರದ ಕುವೆಂಪು ಬಡಾವಣೆಯ ಮನೆಯೊಂದರಲ್ಲಿ ಪ್ರವೀಣ್ ಬಾಡಿಗೆಗೆ ವಾಸವಾಗಿದ್ದರು. ಏಕಾಂಗಿಯಾಗಿ ಮನೆಯಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಪ್ರವೀಣ್ ಮನೆಯಿಂದ ಹೊರಗೆ ಕಂಡುಬಾರದ ಹಿನ್ನೆಲೆಯಲ್ಲಿ ಮನೆ ಮಾಲೀಕ ಪರಿಶೀಲಿಸಿದ ಸಂದರ್ಭ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವ ಪ್ರವೀಣನ ಮೃತದೇಹ ಗೋಚರಿಸಿದೆ. ರಾತ್ರಿ ಕಾರಿನಲ್ಲಿ ಅಪರಿಚಿತರು ಬಂದು ಹೋಗಿರುವ ಬಗ್ಗೆ ಮನೆ ಮಾಲೀಕರು ತಿಳಿಸಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು, ಶ್ವಾನ ತಂಡ ಸ್ಥಳ ಪರಿಶೀಲನೆ ನಡೆಸಿದರು.
ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ, ವೃತ್ತ ನಿರೀಕ್ಷಕ ಎಂ.ಮಹೇಶ್, ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ ಸ್ಥಳಕ್ಕೆ ಆಗಮಿಸಿದ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.