ಮನೆ ಬಿದ್ದ ಜಾಗದಲ್ಲೇ ಅಕ್ರಮ ರಸ್ತೆ : ಮಳೆಹಾನಿ ಸಂತ್ರಸ್ತೆಯ ಅಳಲು

12/05/2020

ಮಡಿಕೇರಿ ಮೇ 12 : ತಮ್ಮ ತಂದೆಗೆ ಸೇರಿದ ಶಿರಂಗಳ್ಳಿಯಲ್ಲಿರುವ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯ ನಿವಾಸಿ ಪಿ.ಎಂ.ಕಾಳಮ್ಮ ಎಂಬುವವರು ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ ತಂದೆಯ ಪಾಲಿನ ಜಾಗವನ್ನು ನನ್ನ ಹೆಸರಿಗೆ ಮಾಡಿಕೊಟ್ಟಿದ್ದು, ಆ ಜಾಗದಲ್ಲಿರುವ ಮನೆ 2018ರಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿತ್ತು. ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಅನೇಕ ಸಮಸ್ಯೆಗಳ ನಡುವೆಯೇ ಮಾದಾಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಮಾಡಿಕೊಂಡಿದ್ದೆವು. ಆದರೆ ಶಿರಂಗಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಹೋಗಲು ಉತ್ತಮ ರಸ್ತೆ ನಿರ್ಮಿಸಿಕೊಳ್ಳಲು ಕಳೆದ ಮಾರ್ಚ್ 28 ರಂದು ಹಾನಿಗೊಳಗಾದ ನನ್ನ ಮನೆಯ ಜಾಗವನ್ನು ಜೆಸಿಬಿ ಮೂಲಕ ಅಗೆದು ಹಾಕಿ ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಕಾಳಮ್ಮ ಆರೋಪಿಸಿದರು.
ರಸ್ತೆಗೆಂದು ಮಣ್ಣು ಅಗೆದ ಜಾಗದಲ್ಲಿ 15 ರಿಂದ 20 ಹಸುಗಳಿಗೆ ಕೊಟ್ಟಿಗೆ ಕಟ್ಟಲು ಯೋಜನೆ ಹಮ್ಮಿಕೊಳ್ಳಲಾಗಿತ್ತು. ಯಾವುದೇ ದಾರಿ ನಿರ್ಮಾಣಕ್ಕೆ ಅವಕಾಶ ನೀಡಲು ಒಪ್ಪಿರಲಿಲ್ಲ. ಆದರೆ ಗ್ರಾಮ ಪಂಚಾಯ್ತಿಯವರನ್ನು ಸೇರಿಸಿಕೊಂಡು ಏಕಾಏಕಿ ರಸ್ತೆ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಈಗಾಗಲೇ ಪ್ರಾಕೃತಿಕ ವಿಕೋಪದಿಂದ ಜಾಗವನ್ನು ಕಳೆದುಕೊಂಡಿರುವ ನಾನು ಇರವು ಅಲ್ಪಸ್ವಲ್ಪ ಜಾಗವನ್ನು ಕೂಡ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಪೆÇಲೀಸ್ ಇಲಾಖೆ, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಗ್ರಾ.ಪಂ ಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅತಿವೃಷ್ಟಿಯಿಂದ ಮನೆ ಕಳೆದುಕೊಂಡು ಎರಡು ವರ್ಷ ಕಳೆದರೂ ಸರ್ಕಾರದಿಂದ ಮನೆ ಸಿಕ್ಕಿಲ್ಲ, ಈ ನಡುವೆ ಮನೆ ಇದ್ದ ಜಾಗವನ್ನು ಗ್ರಾಮದ ಕೆಲವರು ಕಸಿದುಕೊಳ್ಳುವ ಚಿಂತನೆಯಲ್ಲಿದ್ದು, ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ನ್ಯಾಯ ದೊರಕ್ಕಿಸಿಕೊಡಬೇಕೆಂದು ಕಾಳಮ್ಮ ಮನವಿ ಮಾಡಿದರು.