ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾದವರಿಗೆ ಉಚಿತ ಪಡಿತರ ವಿತರಿಸಲು ಮನವಿ

12/05/2020

ಮಡಿಕೇರಿ ಮೇ 12 : ಕೊರೋನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕವಾಗಿ ನಷ್ಟಕ್ಕೊಳಗಾಗಿರುವ ನಗರದ ನಿವಾಸಿಗಳಿಗೆ ಸರಕಾರದಿಂದ ಉಚಿತವಾಗಿ ಪಡಿತರ ಸಾಮಾಗ್ರಿಗಳನ್ನು ವಿತರಿಸುವಂತಾಬೇಕು ಎಂದು ಮಡಿಕೇರಿ ನಾಗರಿಕರ ಪರವಾಗಿ ಹಲವು ಜಿಲ್ಲಾಡಳಿತದ ಗಮನಸೆಳೆದಿದ್ದಾರೆ.
ಈ ಸಂಬಂಧವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಸಾಶನ ಸಮಿತಿ ಸದಸ್ಯ ಎಂ.ಕೆ.ಜಯಕುಮಾರ್, ಹಿರಿಯ ನಾಗರಿಕರಾದ ಡಿ.ಹೆಚ್. ತಮ್ಮಪ್ಪ, ಪಿ.ಎ.ಚಂದ್ರ, ವಕೀಲ ಬಿ.ಎಸ್.ರುದ್ರಪ್ರಸನ್ನ ಹಾಗೂ ನಗರಸಭೆ ಮಾಜಿ ಸದಸ್ಯ ಬಿ.ಕೆ.ಅರುಣ್‍ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮಡಿಕೆರಿ ನಗರದ ರಾಜರಾಜೇಶ್ವರಿ ನಗರ, ತ್ಯಾಗರಾಜ ಕಾಲೋನಿ, ಮಹದೇವಪೇಟೆ, ಶಾಸ್ತ್ರಿನಗರ, ಗಣಪತಿ ಬೀದಿ, ಗೌಳಿಬೀದಿ, ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಜ್ಯೋತಿನಗರ ಮುಂತಾದ ಸ್ಥಳಗಳಲ್ಲಿ ನಡೆಸಿರುವ ಸಮೀಕ್ಷೆಯ ಪ್ರಕಾರ, ಈ ಬಡಾವಣೆಗಳಲ್ಲಿ ಬಹುತೇಕ ದಿನಗೂಲಿ ನೌಕರರು, ಬಡಗಿಗಳು, ಸಣ್ಣ ವ್ಯಾಪಾರಿಗಳು, ಇಲೆಕ್ಟ್ರಿಷಿಯನ್, ನಗರದ ಸಣ್ಣ ಹೊಟೇಲ್ ಮತ್ತು ಅಂಗಡಿಗಳಲ್ಲಿ ದುಡಿಯುವ ಕಾರ್ಮಿಕರೇ ಅಧಿಕವಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಲಾಕ್‍ಡೌನ್‍ನಿಂದಾಗಿ ಯಾವುದೇ ಆದಾಯವಿಲ್ಲದೆ ಈ ಮಂದಿ ದಿನನಿತ್ಯದ ಅಗತ್ಯಗಳಿಗೆ ಯಾವುದೇ ಮಾರ್ಗ ಕಾಣದೆ ಕಂಗಾಲಾಗಿದ್ದಾರೆ. ಅವರ ಕೈಯ್ಯಲ್ಲಿದ್ದ ಅಲ್ಪಸ್ವಲ್ಪ ಉಳಿಕೆಯೂ ಖರ್ಚಾಗಿ ಮುಂದೆ ದಾರಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರುಗಳು ಜಿಲ್ಲಾಧಿಕಾರಿಗಳ ಗಮನಸೆಳೆದಿದ್ದಾರೆ.
ಈ ಮಂದಿ ಹೆಚ್ಚಿನವರು ವಾಹನಗಳನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಎಪಿಎಲ್ ಪಟ್ಟಿಗೆ ಸೇರ್ಪಡೆಯಾಗಿದ್ದು, ಅವರಿಗೆ ಆಪತ್ಕಾಲದಲ್ಲಿ ಸರಕಾರದಿಂದ ಸಿಗಬಹುದಾಗಿದ್ದ ಎಲ್ಲಾ ಸವಲತ್ತುಗಳಿಂದಲೂ ವಂಚಿತರಾಗಿದ್ದಾರೆ. ಆದ್ದರಿಂದ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಜಿಲ್ಲಾಧಿಕಾರಿಗಳ ಅಧಿಕಾರ ವ್ಯಾಪ್ತಿಯೊಳಗೆ ಅವರಿಗೆ ಉಚಿತವಾಗಿ ಪಡಿತರ ವಿತರಿಸುವ ಮೂಲಕ ಅವರ ಸಂಸಾರದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯೊಂದಿಗೆ ಅರ್ಹರ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಪಡಿತರ ವಿತರಣಾ ಅಂಗಡಿಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.