ಕೊಡಗು ಪ್ರೆಸ್ ಕ್ಲಬ್ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

13/05/2020

ಮಡಿಕೇರಿ ಮೇ 13 : ಕೊಡಗು ಪ್ರೆಸ್ ಕ್ಲಬ್ 2020-21ನೇ ಸಾಲಿನ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪತ್ರಿಕಾ ಭವನದಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಮೇ 20 ರೊಳಗೆ ಸಲ್ಲಿಸಬೇಕು.
ಮೇ 21 ರಂದು ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಸದಸ್ಯತ್ವ ಅರ್ಜಿ ಪರಿಶೀಲಿಸಲಾಗುವುದೆಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್.ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯ ಸಮಗ್ರ ತಿದ್ದುಪಡಿ ಬೈಲಾ 2019 ರನ್ವಯ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕ್ಲಬ್‍ನ ಸಾಮಾನ್ಯ ಸದಸ್ಯರಾಗುವವರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಸಂಪಾದಕರು/ ಜಿಲ್ಲಾ ವರದಿಗಾರರಿಂದ ದೃಢೀಕರಣ ಪತ್ರ ಪಡೆದು ಅರ್ಜಿ ಸಲ್ಲಿಸಬೇಕು. ಸದಸ್ಯರಾಗುವವರು ಪತ್ರಕರ್ತರಾಗಿರುವುದು ಹಾಗೂ ಪತ್ರಿಕಾ ಕಾರ್ಯಾಲಯದಲ್ಲಿ ಇರುವುದು ಕಡ್ಡಾಯ. ಸದಸ್ಯರು ಪತ್ರಕರ್ತ ಸ್ಥಾನದಿಂದ ಅವಧಿ ಮುಕ್ತಾಯಗೊಂಡಾಗ ತನ್ನಿಂದ ತಾನೇ ಸದಸ್ಯತ್ವದಿಂದ ಅನರ್ಹರಾಗುತ್ತಾರೆ.
ಸಾಮಾನ್ಯ ಸದಸ್ಯರಾಗುವವರು ಕಡ್ಡಾಯವಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ/ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು. ಕೊಡಗು ಜಿಲ್ಲಾ ಪತ್ರಕರ್ತರ ಸಂಘ/ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯದಿದ್ದರೆ ಕ್ಲಬ್‍ನ ಆಜೀವ ಸದಸ್ಯತ್ವ ಮತ್ತು ಸಾಮಾನ್ಯ ಸದಸ್ಯತ್ವ ರದ್ದಾಗುತ್ತದೆ. ಸಾಮಾನ್ಯ ಸದಸ್ಯರ ವ್ಯಾಪ್ತಿಗೆ ವೃತ್ತಿನಿರತ ಪತ್ರಕರ್ತರು, ಸಂಪಾದಕರು, ಉಪಸಂಪಾದಕರು, ಪತ್ರಿಕಾ ಅಧಿಕೃತ ಛಾಯಾಚಿತ್ರಕಾರರು, ಮಾಧ್ಯಮ ಪ್ರತಿನಿಧಿಗಳು, ವ್ಯವಸ್ಥಾಪಕ ಸಂಪಾದಕರು ಹಾಗೂ ಪತ್ರಿಕಾ ಮಾಲೀಕತ್ವ ಹೊಂದಿರುವ ಸಂಪಾದಕರು ಬರುತ್ತಾರೆ.
ಪ್ರೆಸ್ ಕ್ಲಬ್‍ನ ಸಾಮಾನ್ಯ ಸದಸ್ಯರಾಗಿ ಸತತ ನಾಲ್ಕು ಬಾರಿ ನವೀಕರಿಸಿದ ಸದಸ್ಯರು ಆಜೀವ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು. ವಾರ್ತಾ ಇಲಾಖೆ ಅಧಿಕಾರಿ, ಸಹಾಯಕ ಅಧಿಕಾರಿಗಳು, ಪತ್ರಿಕಾ ಕಲಾವಿದರು, ಪತ್ರಿಕಾ ಕಚೇರಿಯ ವ್ಯವಸ್ಥಾಪಕರು, ಜಾಹೀರಾತು ವ್ಯವಸ್ಥಾಪಕರು, ಪ್ರಸರಣಾ ವ್ಯವಸ್ಥಾಪಕರು, ಮುದ್ರಕರು, ಪ್ರಕಾಶಕರು, ಕರಡು ತಿದ್ದುಪಡಿಗಾರರ, ಪತ್ರಕರ್ತರ ಸಂಘದ ಸಲಹೆಗಾರರು, ಅರೆ ಸರ್ಕಾರಿ/ ಸರ್ಕಾರಿ/ ನೌಕರರಾಗಿರುವ ಪತ್ರಕರ್ತರು, ಮೂಲತಃ ಕೊಡಗಿನವರಾಗಿದ್ದುಕೊಂಡು ಜಿಲ್ಲೆಯ ಹೊರಗೆ ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರು ಸಹ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು.
ಹೊಸ ಮತ್ತು ನವೀಕರಣ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದಾಗ ಆ ವ್ಯಕ್ತಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದವನೇ ಅಲ್ಲವೇ ಎಂಬ ಸಂಶ ಆಡಳಿತ ಮಂಡಳಿಗೆ ಬಂದಾಗ ಸದಸ್ಯತ್ವ ರದ್ದು ಮಾಡುವ, ತಿರಸ್ಕರಿಸುವ ಅಧಿಕಾರಿ ಆಡಳಿತ ಮಂಡಳಿಗೆ ಇರುತ್ತದೆ. ಮೂರು ಸದಸ್ಯರ ಸಹಿತ ಮತ್ತು ಅನುಮೋದನೆಯ ಮೇಲೆ ಮಾತ್ರವೇ ಸದಸ್ಯತ್ವ ನೀಡಲಾಗುತ್ತದೆ. ಆಜೀವ ಸದಸ್ಯತ್ವಕ್ಕೆ 2 ಸಾವಿರ ರೂ. ಶುಲ್ಕ ಪಾವತಿಸಬೇಕು. ಆಜೀವ ಸದಸ್ಯತ್ವ ಹೊಂದಿರುವವರು ನವೀಕೃತ ಕಾರ್ಡ್ ಹೊಂದಲು 100 ರೂ. ಪಾವತಿಸಬೇಕು. ಹೊಸದಾಗಿ ಸಾಮಾನ್ಯ ಹಾಗೂ ಸಹ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು 580 ಹಾಗೂ ನವೀಕರಣಕ್ಕೆ 480 ರೂ. ಪಾವತಿಸಬೇಕು.