ಕೊಡವ ಹಾಕಿ ನಮ್ಮೆ ಮತ್ತು ಪಾಂಡಂಡ ಕುಟ್ಟಪ್ಪ ಸಹೋದರರು

13/05/2020

ಕೊಡವ ಹಾಕಿ ರಂಗದ ಇತಿಹಾಸಕಾರ ಇನ್ನು ನೆನಪು ಮಾತ್ರ. ಪಾಂಡಂಡ ಕುಟ್ಟಪ್ಪ ಕುಟ್ಟಣಿ ಮತ್ತು ಅವರ ಸಹೋದರ ಕಾಶಿ ಪೊನ್ನಪ್ಪ ಅವರು 1997ರಲ್ಲಿ ಕಂಡ ಕನಸಿನ ಕೂಸು ವಿಶ್ವಮಟ್ಟಕ್ಕೆ ಬೆಳೆಯುತ್ತದೆ, ಕೊಡಗಿನ ಕ್ರೀಡಾರಂಗದಲ್ಲಿ ಇತಿಹಾಸ ಸೃಷ್ಟಿಸುತ್ತದೆ ಎಂದು ಸ್ವತಃ ಅವರಿಗೆ ನಿರೀಕ್ಷೆ ಇರಲಿಲ್ಲ. ಅಷ್ಟರ ಮಟ್ಟಿಗೆ ಕೊಡಗಿನ ಕ್ರೀಡಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೊಡವ ಹಾಕಿ ನಮ್ಮೆಯು 1997ರಲ್ಲಿ ಕರಡದಲ್ಲಿ 60 ತಂಡಗಳೊಡನೆ ಆರಂಭವಾಯಿತು. ನಂತರದ ದಿನಗಳಲ್ಲಿ ಜನಾಂಗ ಕ್ರೀಡೆಯು ಕೊಡವ ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಇತರೆ ಜನಾಂಗಗಳಿಗೂ, ಇತರೆ ಕ್ರೀಡೆಗಳಿಗೂ ವಿಸ್ತರಿಸಿ ಇತಿಹಾಸ ಸೃಷ್ಟಿಸಿತು. ಕೊಡಗಿನಲ್ಲಿ ಏಪ್ರಿಲ್-ಮೇ ತಿಂಗಳು ಎಲ್ಲೆಂದರಲ್ಲಿ ಕ್ರೀಡೆಯ ಕಲರವ ಕಂಡುಬರುತ್ತಿತ್ತು. ಇದಕ್ಕೆ ನಾಂದಿ ಹಾಡಿದವರು ಕುಟ್ಟಪ್ಪ ಸಹೋದರರು ಎಂದರೆ ಅತಿಶಯೋಕ್ತಿಯಲ್ಲ. ಇದರ ಪೂರ್ಣ ಕೀರ್ತಿ ಇವರಿಗೆ ಸಲ್ಲುತ್ತದೆ.
ಕೊಡಗಿನಲ್ಲಿ ಆರಂಭದ ದಿನಗಳಿಂದಲೂ ಹಾಕಿ ಪಂದ್ಯಾವಳಿಗಳ ತವರೂರಾಗಿತ್ತು. ನಂತರದ ದಿನಗಳಲ್ಲಿ ಅಂದರೆ 90ರ ದಶಕದಲ್ಲಿ ಪಂದ್ಯಾವಳಿಯ ಕೊರತೆ ಎದ್ದು ಕಾಣುತ್ತಿತ್ತು. ಅಂತಹ ಸಮಯದಲ್ಲಿ ಕೊಡಗಿನ ಹಾಕಿಗೆ ಒಂದು ಪುನರ್ ಚೇತನ ನೀಡಿದ್ದು ಹಾಕಿ ನಮ್ಮೆ. ಹಾಕಿ ನಮ್ಮೆ ಆರಂಭಿಸಿದ್ದು ಹಾಕಿ ರಂಗದಲ್ಲಿ ಒಂದು ವಿದ್ಯುತ್ ಸಂಚಲನ ಉಂಟುಮಾಡಿತ್ತು. ಸುಮಾರು 22ವರ್ಷಗಳ ಕಾಲ ಕುಟುಂಬವೊಂದು ಪಂದ್ಯಾಟವನ್ನು ನಡೆಸಿಕೊಂಡು ಬರುವುದು, 300ಕ್ಕೂ ಅಧಿಕ ಕುಟುಂಬಗಳು ಭಾಗವಹಿಸುವುದು, ಆಟಗಾರರ ಭಾಗವಹಿಸುವಿಕೆ, ತಾಂತ್ರಿಕ ಸಮಿತಿಯ ಮತ್ತು ತೀರ್ಪುಗಾರರ ಬೆಂಬಲ, ಕುಟುಂಬದವರ ಪರಿಶ್ರಮ ಎಲ್ಲವೂ ಪುಟ್ಟ ಜಿಲ್ಲೆಯೊಂದರಲ್ಲಿ ಊಹಿಸಲು ಅಸಾಧ್ಯ. ತಿಂಗಳುಗಳ ಕಾಲ ನಡೆಯುವ ಪಂದ್ಯಾಟವಳಿಯನ್ನು ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಅದರಲ್ಲಿ ತೊಡಗಿಸಿಕೊಳ್ಳುವುದು ಒಂದು ಸಾಹಸ. ಅದರೊಡನೆ ಅದನ್ನು ಆಯೋಜನೆ ಮಾಡುವ ಕುಟುಂಬದವರು ಕಡಿಮೆ ಎಂದರೆ 2 ವರ್ಷಗಳಿಂದ ಪೂರ್ವಭಾವಿ ಸಿದ್ಧತೆಯನ್ನು ಪ್ರಮುಖವಾಗಿ ಆರ್ಥಿಕ ಕ್ರೋಢೀಕರಣ ಮುಖ್ಯ. ಏಕೆಂದರೆ ಆರಂಭದ ದಿನಗಳಲ್ಲಿ ಯಾವುದೇ ಪ್ರಾಯೋಜಕತ್ವ ಇಲ್ಲದೇ ಪಂದ್ಯಾಟವನ್ನು ಕುಟುಂಬವೊಂದು ನಡೆಸುತ್ತಿತ್ತು ಎಂದರೆ ವಿಶೇಷ ಎನ್ನಬಹುದು.
ನಂತರದ ದಿನಗಳಲ್ಲಿ ಇದು ಬೆಳೆದಂತೆ ಹಾಕಿ ನಮ್ಮೆಗೆ ವಾಣಿಜ್ಯೀಕರಣ ಸೋಕಿತು ಎನ್ನಬಹುದು. ಆನಂತರ ಅದು ಅದ್ದೂರಿತನ ಪಡೆಯಿತು. ಇದರಿಂದ ಹಾಕಿ ನಮ್ಮೆಯ ಮೂಲ ಉದ್ದೇಶ ಮರೆಯಾಯಿತು ಎನ್ನಬಹುದು. ಯಾವ ಹಾಕಿ ನಮ್ಮೆ ಕೊಡಗಿನಲ್ಲಿ ನಿರಂತರವಾಗಿ ಹಾಕಿ ಕಲರವವನ್ನು ಹುಟ್ಟು ಹಾಕಬೇಕಿತ್ತೋ ಅದು ಕೇವಲ ಏಪ್ರಿಲ್ ಮೇ ತಿಂಗಳಿಗೆ ಸೀಮಿತವಾಯಿತು. ಆಟಗಾರರು ಕೂಡ ಪಂದ್ಯಾಟಕ್ಕೆ ಆರಂಭದ ಮೊದಲು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸೋತ ನಂತರ ಮೈದಾನದಿಂದ ದೂರ ಉಳಿಯುತ್ತಾರೆ. ಇಂತಹ ಬೆಳವಣಿಗೆಯಿಂದ ಹಾಕಿ ಬೆಳೆಯದು. ಹಾಕಿ ನಮ್ಮೆಯ ಉದ್ದೇಶ ಪರಿಪೂರ್ಣವಾಗದು. ಸ್ಥಳೀಯವಾಗಿ ಎಲ್ಲಾ ಕುಟುಂಬದ ಆಟಗಾರರು ಅಥವಾ ಆಯಾ ಗ್ರಾಮದ ಆಟಗಾರರು ವರ್ಷಪೂರ್ತಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿಕೊಂಡು ಅಭ್ಯಾಸದಲ್ಲಿ ತೊಡಗಬೇಕು. ಇದರಿಂದ ಸ್ಥಳೀಯವಾಗಿ ಆಟಗಾರರು ಹೊರಹೊಮ್ಮುತ್ತಾರೆ.
ಕಳೆದ 22 ವರ್ಷಗಳಿಂದ ಪಂದ್ಯಾವಳಿಗಳನ್ನು ನಾವು ಅವಲೋಕಿಸಿದಾಗ ವಿಜೇತ ತಂಡಗಳು ಹೆಚ್ಚಾಗಿ ಪುನರಾವರ್ತನೆಗೊಂಡಿದೆ. ಪಂದ್ಯಾವಳಿಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಕಾರಗೊಳಿಸಿದವರು ಗೆಲುವಿನ ರೂವಾರಿ ಎನಿಸಿಕೊಂಡವರು ಬಹುತೇಕ ಅನುಭವಿ ಹಿರಿಯ ಆಟಗಾರರೆ. ಏಕೆಂದರೆ ಅವರು ದೀರ್ಘಕಾಲ ತಮ್ಮನ್ನು ತಾವು ಕ್ರೀಡಾ ಮೈದಾನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹೊಸ ಆಟಗಾರರಲ್ಲಿ ಈ ನ್ಯೂನತೆ ಎದ್ದು ಕಾಣುತ್ತದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಸಮಿತಿ, ತೀರ್ಪುಗಾರರ ಅಕಾಡೆಮಿಗಳ ನಡುವೆ ಸ್ವಲ್ಪ ಮಟ್ಟಿಗೆ ವೈಮನಸ್ಸು ಬೆಳೆದಿದ್ದು, ಎದ್ದು ಕಾಣುತ್ತದೆ. ಇದು ಕೊಡವ ಹಾಕಿ ನಮ್ಮೆಯ ಬೆಳೆವಣಿಗೆಗೆ ಪೂರಕವಾದ ನಡವಳಿಕೆ ಅಲ್ಲ. ಕೊಡವ ಹಾಕಿ ನಮ್ಮೆ ಬೆಳೆಯಲು ತಾಂತ್ರಿಕ ಸಮಿತಿಯ ತೀರ್ಪುಗಾರರ ಪರಿಶ್ರಮ ಸಾಕಷ್ಟಿದೆ. ಅದೇ ರೀತಿ ಅವರುಗಳು ಕೂಡ ಆಯೋಜಿಸಿರುವ ಕುಟುಂಬದವರ ಪರಿಶ್ರಮವನ್ನು ಗಮನಿಸಬೇಕು. ಎಲ್ಲರೂ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ಹಾಕಿ ನಮ್ಮೆ ಉಳಿಯಲು ಹಾಗೂ ಬೆಳೆಯಲು ಸಾಧ್ಯ.
ಕುಟ್ಟಪ್ಪ ಸಹೋದರರ ಕನಸು ಸಾಕಾರಗೊಳಿಸುವ ಜವಾಬ್ದಾರಿ ಕೊಡಗಿನ ಕ್ರೀಡಾಭಿಮಾನಿಗಳ, ಕ್ರೀಡಾಪಟುಗಳ, ತೀರ್ಪುಗಾರರ ಮೇಲಿದೆ. ಅವರು ಕ್ರೀಡಾ ನಮ್ಮೆಯನ್ನು ಆರಂಭಿಸಿದ ಉದ್ದೇಶವನ್ನು ಅರಿಯಬೇಕಿದೆ. ಹಾಕಿ ಕ್ರೀಡೆಯು ಪುನಶ್ಚೇತನಗೊಳ್ಳಲು ಕ್ರೀಡಾಭ್ಯಾಸ ನಿರಂತರವಾಗಿರಬೇಕು. ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಕೊಡವ ಹಾಕಿ ಅಕಾಡೆಮಿಯು ಆರಂಭಿಸಬೇಕು. ಅದರೊಡನೆ ಇತರೆ ಹಾಕಿ ಸಂಸ್ಥೆಯು ಕೈಜೋಡಿಸಬೇಕು. ಪಂದ್ಯಾವಳಿಯನ್ನು ವಿವಿಧ ಸ್ಥಳಗಳಲ್ಲಿ ಆಯೋಜಿಸಿ ತಾತ್ಕಾಲಿಕ ವ್ಯವಸ್ಥೆಗೆ ಲಕ್ಷಾಂತರ ಹಣವನ್ನು ಪೋಲು ಮಾಡುವ ಬದಲು ನಿಗಧಿತ ಎರಡು-ಮೂರು ಸ್ಥಳಗಳಲ್ಲಿ ಆಯೋಜಿಸಿ ಬರುವ ಅನುದಾನದಿಂದ ಕ್ರೀಡಾ ಕೂಟ ನಡೆಯಲು ಶಾಶ್ವತ ನೆಲೆಗಟ್ಟನ್ನು ಒದಗಿಸುವ ವ್ಯವಸ್ಥೆ ಆಗಬೇಕು. ಈ ಕೂಗು ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಯಾರೂ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿಲ್ಲ. ಅಂತಹ ಸ್ಥಳಗಳನ್ನು ತರಭೇತಿ ಕೇಂದ್ರಗಳಾಗಿ, ಕ್ರೀಡಾ ಶಾಲೆಗಳಾಗಿ ಬದಲಾಯಿಸುವ ಉದ್ದೇಶವಿರಬೇಕು. ಅದೇ ರೀತಿ ಕೊಡವ ಹಾಕಿ ನಮ್ಮೆ ಮತ್ತು ಇತರ ಕ್ರೀಡಾ ಉತ್ಸವಗಳು ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಮುಂದಿನ ಅವಕಾಶಗಳನ್ನು ಕಲ್ಪಿಸುವ ವೇದಿಕೆಯಾಗಬೇಕು.
ಕೊಡವ ಹಾಕಿ ನಮ್ಮೆಯ ಉದ್ದೇಶವನ್ನು ಅರಿಯಬೇಕು. ಹಾಕಿ ನಮ್ಮೆಯಲ್ಲಿ ಬರಿ ತಂಡಗಳ ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆಗೆ ಒತ್ತು ನೀಡದೇ ಪ್ರತಿಭಾನ್ವೇಷಣೆಯ ವೇದಿಕೆಯಾಗಬೇಕು. ಕುಟುಂಬಗಳು ಕೂಡ ಬರೀ ಪಂದ್ಯಾವಳಿಯಲ್ಲಿ ಭಾಗವಹಿಸಿ ಕೈತೊಳೆದುಕೊಳ್ಳದೆ ಕುಟುಂಬದಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಕೊಡವ ಹಾಕಿ ನಮ್ಮೆಯಲ್ಲಿ ಇದುವರೆಗೆ ಶಿಸ್ತುಬದ್ಧ ಪ್ರದರ್ಶನ ಕಂಡಿದೆ. ಕೆಲವು ವೇಳೆ ಸ್ವಲ್ಪ ಅತೃಪ್ತಿ ಕಂಡರು ಇದು ಕ್ರೀಡೆಯಲ್ಲಿ ಸರ್ವೇ ಸಾಮಾನ್ಯ. ಏನೇ ಆಗಲಿ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿಯು ಕ್ರೀಡಾರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ಕೊಡಗಿನಲ್ಲಿ ಮಾರ್ಚ್-15ರಿಂದ ಏಪ್ರಿಲ್-15ರ ವರೆಗೆ ಹೇಗೆ ದೇವರ ಮತ್ತು ಊರ ಉತ್ಸವಗಳು ಹಬ್ಬಗಳು ನಡೆಯುತ್ತದೆಯೋ ಅದೇ ರೀತಿ ಏಪ್ರಿಲ ಮತ್ತು ಮೇ ತಿಂಗಳಲ್ಲಿ ಕೊಡಗಿನುದ್ದಕ್ಕೂ ಕ್ರೀಡಾ ಕಲರವ ಕಂಡುಬರುತ್ತದೆ. ಕಳೆದೆರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಗಳಿಂದ ಇದು ಕಂಡುಬರದಿದ್ದರು ಮುಂದಿನ ದಿನಗಳಲ್ಲಿ ಇದು ಪುನಃ ಆರಂಭವಾಗಲಿ. ಅದಕ್ಕೆ ಕಾರಣಕರ್ತರಾದ ಪಾಂಡಂಡ ಕುಟ್ಟಪ್ಪ ಕುಟ್ಟಣಿ ಸಹೋದರರು ಕೊಡಗಿನ ಕ್ರೀಡಾ ಕ್ಷೇತ್ರದಲ್ಲಿ ನಕ್ಷತ್ರವಾಗಿ ಉಳಿಯಲಿ ಎಂಬುದು ಕ್ರೀಡಾಭಿಮಾನಿಗಳ ಆಶಯ.

ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ, ಮಡಿಕೇರಿ.
(9448899554, 9448809553).