ಕೊಡಗಿನ ಪ್ರವಾಸಿತಾಣಗಳ ಅಭಿವೃದ್ಧಿ : ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆ

ಮಡಿಕೇರಿ ಮೇ 13 : ಕೋವಿಡ್ 19 ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಸಂಕಷ್ಟಕ್ಕೆ ತುತ್ತಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದು ಪ್ರವಾಸೋದ್ಯಮ ಗರಿಗೆದರುವ ಆಶಾಭಾವನೆ ಎಲ್ಲರಲ್ಲಿದೆ.
ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ವಿವರ ಇಂತಿದೆ. ನಗರದ ರಾಜಾಸೀಟ್ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುವ ಯೋಜನೆ, 2017-18 ರ ಕಾಮಗಾರಿಯ ಅಂದಾಜು ಮೊತ್ತ ರೂ. 455 ಲಕ್ಷ ಆಗಿದ್ದು ಕಾಮಗಾರಿಯ ನಿರ್ವಹಣಾ ಸಂಸ್ಥೆ ಲೋಕೋಪಯೋಗಿ ಇಲಾಖೆ ಮಡಿಕೇರಿ ಆಗಿದ್ದು, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೊಡಗು ಜಿಲ್ಲೆಯ ಕೆಂಪುರಾಶಿ ಮೊಟ್ಟೆಯಿಂದ ಮಂಟಕಲ್ ಶಾಲೆಯವರೆಗೆ 2 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿಯ ಅಂದಾಜು ಮೊತ್ತ 300 ಲಕ್ಷ ರೂ ಆಗಿದ್ದು, 225 ಲಕ್ಷ ರೂ. ಬಿಡುಗಡೆಯಾಗಿದ್ದು 75 ಲಕ್ಷ ರೂ. ಬಿಡುಗಡೆಗೆ ಬಾಕಿ ಇದೆ.
ಕೊಡಗು ಜಿಲ್ಲೆಯ ದುಬಾರೆ ಬಳಿ ಕಾವೇರಿ ನದಿ ತೀರದ ಬಳಿ ಪಾರ್ಕಿಂಗ್ ಸೌಲಭ್ಯ ಅಭಿವೃದ್ಧಿ 2016-17 ರ ಕಾಮಗಾರಿಯ ಅಂದಾಜು ಮೊತ್ತ 102 ಲಕ್ಷ ರೂ. ಆಗಿದ್ದು, ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದೆ. ಮಡಿಕೇರಿ ತಾಲೂಕಿನ ನಾಲ್ಕುನಾಡು ಅರಮನೆ ಸಂಪರ್ಕ ರಸ್ತೆ ಅಭಿವೃದ್ಧಿ (ಸಿ.ಸಿ.ರಸ್ತೆ) ಕಾಮಗಾರಿಯ ಅಂದಾಜು ಮೊತ್ತ 300 ಲಕ್ಷ ರೂ ಆಗಿದ್ದು 100 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಸೋಮವಾರಪೇಟೆ ತಾಲೂಕು ದುಬಾರೆಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತ 400 ಲಕ್ಷ ರೂ. ಆಗಿದ್ದು, 100 ಲಕ್ಷ ರೂ. ಬಿಡುಗಡೆಯಾಗಿದೆ. ಹೊಸದಾಗಿ 400 ಲಕ್ಷ ರೂ. ಗಳ ಅನುದಾನವನ್ನು ಬಿಡುಗಡೆ ಮಾಡಿ ಅನುದಾನವನ್ನು ಅರಣ್ಯ ಇಲಾಖೆಗೆ ನೀಡಿ ಅರಣ್ಯ ಇಲಾಖೆಯಿಂದ ಕಾಮಗಾರಿ ಕೈಗೊಳ್ಳಲು 2019 ರ ಮೇ 28 ರಂದು ತಿಳಿಸಲಾಗಿದೆ.
ನಗರದ ಹೊರ ವಲಯದಲ್ಲಿ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಕಾಮಗಾರಿ 2013-14 ರ ಅಂದಾಜು ಮೊತ್ತ 268 ಲಕ್ಷ ರೂ. ಆಗಿದೆ. 171.93 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಯ ಆರ್ಥಿಕ ಬಿಡ್ ಪ್ರಗತಿಯಲ್ಲಿದೆ. ಜೊತೆಗೆ ಸೋಮವಾರಪೇಟೆ ತಾಲೂಕು ಮಲ್ಲಳ್ಳಿ ಜಲಪಾತ ಪ್ರದೇಶದಲ್ಲಿ ಮೆಟ್ಟಿಲುಗಳ ನಿರ್ಮಾಣ, ರೈಲಿಂಗ್ಸ್, ಪಾರ್ಕಿಂಗ್, ಮಳಿಗೆ ಮುಂತಾದ ಸೌಲಭ್ಯಗಳ ನಿರ್ಮಾಣ 2014-15 ರ ಕಾಮಗಾರಿಯ ಅಂದಾಜು ಮೊತ್ತ 192.92 ಲಕ್ಷ ರೂ.ಗಳಾಗಿದ್ದು, 140 ಲಕ್ಷ ರೂ. ಬಿಡುಗಡೆಯಾಗಿರುತ್ತದೆ. 52.92 ಲಕ್ಷ ರೂ ಬಿಡುಗಡೆಗೆ ಬಾಕಿ ಇದೆ.
ಜಿಲ್ಲೆಯ ಕುಶಾಲನಗರದ ಮಡಿಕೇರಿ ರಸ್ತೆಯಲ್ಲಿರುವ ತಾವರೆ ಕೆರೆ ಹತ್ತಿರ ಪ್ರವಾಸಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಯ ಅಂದಾಜು ಮೊತ್ತ 50 ಲಕ್ಷ ರೂ. ಆಗಿದ್ದು, 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. 2019 ರ ಸೆಪ್ಟಂಬರ್ 6 ರಂದು ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಕಾಮಗಾರಿಯನ್ನು ಅಭಿವೃದ್ಧಿ ಪಡಿಸುವ ಅಗತ್ಯತೆ ಕಂಡುಬರದ ಕಾರಣ ಈ ಅನುದಾನವನ್ನು ಚೇಲಾವರ ಜಲಪಾತದ ಅಭಿವೃದ್ಧಿ ಪಡಿಸಲು ಸೂಚಿಸಲಾಗಿತ್ತು. ಆ ಸಂಬಂಧ ಚೇಲಾವರ ಜಲಪಾತಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಜಮೀನು ಮಾಲೀಕರೊಂದಿಗೆ ಚರ್ಚಿಸಿದ್ದು, ನಿರಾಕ್ಷೇಪಣಾ ಪತ್ರ ಪಡೆಯಲು ಕ್ರಮವಹಿಸಲಾಗಿದೆ. ಈಗಾಗಲೇ ಕೆಆರ್ಐಡಿಎಲ್ ಅವರಿಂದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ನಗರದ ಓಂಕಾರೇಶ್ವರ ದೇವಸ್ಥಾನದ ಬಳಿ ಬಟ್ಟೆ ಬದಲಿಸುವ ಕೊಠಡಿ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತ 36.60 ಲಕ್ಷ ರೂ.ಗಳಾಗಿದ್ದು, 16 ಲಕ್ಷ ರೂ. ಅನುದಾನ ಬಿಡುಗಡೆಯಾಗಿರುತ್ತದೆ. 20.60 ಲಕ್ಷ ರೂ. ಬಿಡುಗಡೆಗೆ ಬಾಕಿ ಇದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಇರ್ಪು ಜಲಪಾತ ಪ್ರವಾಸ ತಾಣದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿ 2015-16 ರ ಕಾಮಗಾರಿಯ ಅಂದಾಜು ಮೊತ್ತ 50 ಲಕ್ಷ ರೂ. ಆಗಿದ್ದು, ಅರಣ್ಯ ಇಲಾಖೆಯು ಈ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಮಡಿಕೇರಿ ಅರಣ್ಯ ಇಲಾಖೆ ವತಿಯಿಂದ ಅಲ್ಪಾವಧಿ ಟೆಂಡರ್ ಕರೆಯಲಾಗಿದೆ.
ಇರ್ಪು ಜಲಪಾತ ಪ್ರವಾಸಿ ತಾಣದಲ್ಲಿ ಪಾರ್ಕಿಂಗ್ ಹಾಗೂ ಉದ್ಯಾನವನ ನಿರ್ಮಾಣ 2018-19 ರ ಕಾಮಗಾರಿಯ ಅಂದಾಜು ಮೊತ್ತ 50 ಲಕ್ಷ ರೂ. ಆಗಿದ್ದು 50 ಲಕ್ಷ ರೂ. ಆಗಿದ್ದು ಅರಣ್ಯ ಇಲಾಖೆಯು ಕಾಮಗಾರಿಯನ್ನು ನಿರ್ವಹಿಸುತ್ತಿದೆ. 2019 ರ ಸೆಪ್ಟಂಬರ್ 6 ರಂದು ನಡೆದ ಜಿಲ್ಲಾ ಅಭಿವೃದ್ಧಿ ಪಡಿಸುವ ಅಗತ್ಯತೆ ಕಂಡುಬರದ ಕಾರಣ ಈ ಈ ಅನುದಾನದಲ್ಲಿ 15 ಲಕ್ಷ ರೂ. ಗಳನ್ನು ಮಾತ್ರ ಉದ್ಯಾನವನ ಅಭಿವೃದ್ಧಿಗಾಗಿ ಬಳಸಲು ಅರಣ್ಯ ಇಲಾಖೆಯವರು ಕೋರಿದ್ದು, ಉಳಿದ 35 ಲಕ್ಷ ರೂ. ಗಳನ್ನು ದುಬಾರೆಯಲ್ಲಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಲು ತೀರ್ಮಾನಿಸಿದ್ದು ಈಗಾಗಲೇ ಅನುದಾನವನ್ನು ಜಿಲ್ಲಾ ಅಭಿವೃದ್ಧಿ ಸಮಿತಿಗೆ ಬಿಡುಗಡೆ ಮಾಡಲು ಕೋರಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಅವರು ಮಾಹಿತಿ ನೀಡಿದ್ದಾರೆ.