92 ಬಸ್ ಗಳಲ್ಲಿ ಕೊಡಗಿನಿಂದ ತಮಿಳುನಾಡಿಗೆ ಕಾರ್ಮಿಕರ ಪಯಣ

13/05/2020

ಮಡಿಕೇರಿ ಮೇ 13 : ಜಿಲ್ಲಾಡಳಿತ, ಕೆಎಸ್‍ಆರ್‍ಟಿಸಿ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಅವರ ಸ್ವಂತ ಜಿಲ್ಲೆಗೆ ಕಳುಹಿಸುವ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದೆ.
ಆ ದಿಸೆಯಲ್ಲಿ ತಮಿಳುನಾಡು ರಾಜ್ಯಕ್ಕೆ ವಲಸಿಗ ಕಾರ್ಮಿಕರನ್ನು ಕಡೆದುಕೊಂಡು ಹೋಗಲು ಇದುವರೆಗೆ 92 ಬಸ್‍ಗಳನ್ನು ಕಾಯ್ದಿರಿಸಲಾಗಿದ್ದು, ಈಗಾಗಲೇ 9 ಬಸ್‍ಗಳು ಸೇಲಂ ಮತ್ತು ತಿರುವಣಮಲೈ ಜಿಲ್ಲೆಗೆ ತೆರಳಿವೆ. ಒಂದು ಬಸ್‍ನಲ್ಲಿ 25 ರಿಂದ 30 ಮಂದಿಯಂತೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ ಅವರು ಮಾಹಿತಿ ನೀಡಿದರು.
ಮಂಗಳವಾರ ಕೆದಕಲ್‍ನಿಂದ ಸೆಲಂಗೆ 21 ವಲಸೆ ಕಾರ್ಮಿಕರು, ಪಾಲಿಬೆಟ್ಟದಿಂದ ವಿಲ್ಲೂಪುರಂಗೆ 25 ಮಂದಿ, ಪಾಲಿಬೆಟ್ಟದಿಂದ ಸೇಲಂಗೆ 20 ಮಂದಿ, ಪಾಲಿಬೆಟ್ಟದಿಂದ ನಮಕ್ಕಲಗೆ 23 ಮಂದಿ ಸಿದ್ದಾಪುರದಿಂದ ಸೇಲಂಗೆ 26 ಮಂದಿ ವಲಸೆ ಕಾರ್ಮಿಕರನ್ನು ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಸ್ಯಾನಿಟೈಜರ್, ಬಿಸ್ಕತ್ತು ಪಾಕೆಟ್, ಜ್ಯೂಸ್ ಪಾಕೆಟ್ ಮತ್ತು ನೀರಿನ ಬಾಟಲ್‍ಗಳನ್ನು ಪ್ರತಿಯೊಬ್ಬ ಕಾರ್ಮಿಕರಿಗೆ ಮತ್ತು ಬಸ್ಸಿನ ಚಾಲಕರಿಗೆ ವಿತರಿಸಿ ಕಳಿಸಿಕೊಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ ಯತ್ನಟ್ಟಿ ಅವರು ತಿಳಿಸಿದರು.
ಬುಧವಾರ ಸಹ ಸೇಲಂ ಜಿಲ್ಲೆಗೆ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರಾದ ಗೀತಾ, ತಾಲೂಕು ಕಾರ್ಮಿಕ ಅಧಿಕಾರಿ ಎಂ.ಎಂ ಯತ್ನಟ್ಟಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ, ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ಸೀರಜ್ ಇತರರು ಹಾಜರಿದ್ದರು.