ಗುಂಡುಕುಟ್ಟಿ ಎಸ್ಟೇಟ್ ದರೋಡೆ ಪ್ರಕರಣ : ಮೂವರು ಆರೋಪಿಗಳ ಬಂಧನ : ನಿವೃತ್ತ ರೈಟರ್ ಸಂಚು

13/05/2020

ಮಡಿಕೇರಿ ಮೇ 13 : ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡುಕುಟ್ಟಿ ಎಸ್ಟೇಟ್‍ನಲ್ಲಿ ಮೇ 2ರಂದು ನಡೆದಿದ್ದ 5.18 ಲಕ್ಷ ರೂಪಾಯಿಗಳ ದರೋಡೆ ಪ್ರಕರಣವನ್ನು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 5 ಲಕ್ಷದ 2 ಸಾವಿರ ರೂ.ಗಳನ್ನು ವಶಕ್ಕೆ ಪಡೆದಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಿರಿಯಾಪಟ್ಟಣದ ಬೆಣಗಾಲು ಗ್ರಾಮದ ನಿವಾಸಿ ಟಿ.ವಿ.ಹರೀಶ್(57), ಸುಂಟಿಕೊಪ್ಪ ನಿವಾಸಿ ಕುಮಾರೇಶ್(42) ಹಾಗೂ ಪ್ರಕರಣದ ಸಂಚುಕೋರ, ಮಾದಾಪುರ ಸಮೀಪದ ಇಗ್ಗೋಡ್ಲು ನಿವಾಸಿ ಜಗ್ಗರಂಡ ಕಾವೇರಪ್ಪ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಈ ಪೈಕಿ ಮೊದಲ ಮತ್ತು ಎರಡನೇ ಆರೋಪಿಗಳು ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವಿಚಾರಣೆಗಾಗಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಹರದೂರು ಸಮೀಪದ ಗುಂಡುಕುಟ್ಟಿ ಎಸ್ಟೇಟ್ ಮಾಲೀಕರಾದ ಕರ್ನಲ್ ಕುಮಾರ್ ಅವರು ತೋಟ ಕಾರ್ಮಿಕರಿಗೆ ವೇತನ ನೀಡಲು ತಮ್ಮ ಎಸ್ಟೇಟ್ ರೈಟರ್ ವಿಜಯ್ ಕುಮಾರ್ ಎಂಬವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಸುಂಟಿಕೊಪ್ಪದ ಬ್ಯಾಂಕ್ ಒಂದಕ್ಕೆ ತೆರಳಿ 5.18ಲಕ್ಷ ರೂ.ಗಳನ್ನು ಡ್ರಾ ಮಾಡಿಕೊಂಡು ಗುಂಡುಕುಟ್ಟಿ ಎಸ್ಟೇಟ್ ಬಳಿ ಬಂದಿದ್ದರು.
::: ನಿವೃತ್ತ ರೈಟರ್ ಸಂಚು :::
ಈ ಸಂದರ್ಭ ಎಸ್ಟೇಟ್ ಗೇಟ್ ಬಳಿ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಿಜಯ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಹಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ತನಿಖೆ ನಡೆಸಲು ಸೋಮವಾರಪೇಟೆ ಡಿವೈಎಸ್‍ಪಿ ಶೈಲೇಂದ್ರ ನೇತೃತ್ವದಲ್ಲಿ ಒಂದು ತಂಡ ರಚಿಸಲಾಗಿತ್ತು. ಜಿಲ್ಲಾ ಅಪರಾಧ ಪತ್ತೆ ದಳ, ಸುಂಟಿಕೊಪ್ಪ ಪೊಲೀಸರು, ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಮತ್ತು ಕ್ರೈಂ ಸಿಬ್ಬಂದಿಗಳು ಪ್ರಕರಣವನ್ನು ಬೆನ್ನು ಹತ್ತಿದ್ದರು. ಈ ಸಂದರ್ಭ ಗುಂಡುಕುಟ್ಟಿ ಎಸ್ಟೇಟ್‍ನಲ್ಲಿ ರೈಟರ್ ಕೆಲಸ ಮಾಡಿ ನಿವೃತ್ತನಾಗಿದ್ದ ಕಾವೇರಪ್ಪ ಎಂಬಾತನನ್ನು ಶಂಕೆಯ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ತನಿಖಾ ತಂಡದ ಹಾದಿ ತಪ್ಪಿಸಿದ್ದ. ಬಳಿಕ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಿದ ಪೊಲೀಸರು ಕಾವೇರಪ್ಪನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಕೃತ್ಯವನ್ನು ತಾವು ಸೇರಿದಂತೆ ಮೂವರು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲದೇ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನು ಪ್ರಕರಣ ನಡೆದ 10 ದಿನಗಳ ಅವಧಿಯಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
::: ಆರೋಪಿಗಳ ಹಿನ್ನೆಲೆ :::
ಗುಂಡುಕುಟ್ಟಿ ಎಸ್ಟೇಟ್‍ನಲ್ಲಿ ಈ ಹಿಂದೆ ರೈಟರ್ ಕೆಲಸ ಮಾಡಿದ್ದ ಕಾವೇರಪ್ಪ ಈ ಪ್ರಕರಣದ 3ನೇ ಆರೋಪಿಯಾಗಿದ್ದು, ಈ ಸುಲಿಗೆ ಪ್ರಕರಣದ ಪ್ರಮುಖ ಪಾತ್ರದಾರನಾಗಿದ್ದಾನೆ. ಈತ ಮತ್ತಿಬ್ಬರು ಆರೋಪಿಗಳೊಂದಿಗೆ ಕಳೆದ 1 ತಿಂಗಳಿಂದ ಈ ಕೃತ್ಯಕ್ಕೆ ಸಂಚು ರೂಪಿಸಿದ್ದ ಎಂದು ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ ಹೇಳಿದ್ದಾರೆ. ಮೊದಲ ಆರೋಪಿ ಟಿ.ವಿ ಹರೀಶ್ 2014ರಲ್ಲಿ ಜೈಲಿನಿಂದ ಹೊರಬಂದು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾನೆ. 2004ರಲ್ಲಿ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದೂಕು ಕಳವು, ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಅಪಹರಣ ಮತ್ತು ಟ್ಯಾಕ್ಸಿ ಚಾಲಕನ ಹತ್ಯೆ ಪ್ರಕರಣ, ಸುಂಟಿಕೊಪ್ಪ ಸೆಂಟ್ರಲ್ ಬ್ಯಾಂಕ್ ದರೋಡೆ, ಕುಶಾಲನಗರ ಜೋಸ್ಕೋ ಚಿನ್ನಾಭರಣ ಮಳಿಗೆ ದರೋಡೆ ಪ್ರಕರಣ ಹಾಗೂ 2006ರಲ್ಲಿ ಮಡಿಕೇರಿ ಜೈಲು ಬ್ರೇಕ್ ಪ್ರಕರಣದಲ್ಲಿ ಹರೀಶ್ ಭಾಗಿಯಾಗಿದ್ದಾನೆ.
2ನೇ ಆರೋಪಿ ಸುಂಟಿಕೊಪ್ಪದ ಕುಮಾರೇಶ್ 2009ರಲ್ಲಿ ಕೊಲೆಗೆ ಸುಪಾರಿ ಪಡೆದು ಹೆಬ್ಬಾಲೆ ಸಮೀಪ ಲೋಕೇಶ್ ಎಂಬಾತನನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಮಾತ್ರವಲ್ಲದೇ, 1997ರಲ್ಲಿ ಬಿಜಾಪುರದಲ್ಲಿ ನಡೆದಿದ್ದ ದರೋಡೆ ಪ್ರಕರಣ, ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಕೋಲಾರದ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣಗಳಲ್ಲೂ ಭಾಗಿಯಾದ ಆರೋಪಗಳನ್ನು ಎದುರಿಸುತ್ತಿದ್ದಾನೆ.
ಗುಂಡುಕುಟ್ಟಿ ಎಸ್ಟೇಟ್ ಹಣ ಸುಲಿಗೆ ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್, ಮೊಬೈಲ್ ಫೋನ್ ಸೇರಿದಂತೆ ಕೆಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆಯಬೇಕಿದೆ. ಈ ಕಾರಣಕ್ಕಾಗಿ ಟಿ.ವಿ. ಹರೀಶ್ ಮತ್ತು ಕುಮಾರೇಶ್‍ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗುತ್ತದೆÀ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ತಿಳಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ತನಿಖಾ ತಂಡಕ್ಕೆ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.