ಅನಿವಾಸಿ ಭಾರತೀಯರ ಕಡೆಗಣನೆ ಸರಿಯಲ್ಲ : ಟಿ.ಎಂ.ಶಾಹಿದ್ ತೆಕ್ಕಿಲ್ ಅಸಮಾಧಾನ

ಮಡಿಕೇರಿ ಮೇ 13 : ಕರಾವಳಿ ಜಿಲ್ಲೆಯ ಅನೇಕ ಅನಿವಾಸಿ ಭಾರತೀಯ ಕನ್ನಡಿಗರು ವಿದೇಶದಲ್ಲಿ ವೈದ್ಯರು, ಇಂಜಿನಿಯರ್, ವರ್ತಕರು, ಉದ್ಯಮಿಗಳು ಮಾತ್ರವಲ್ಲದೆ ಕಾರ್ಮಿಕರಾಗಿಯೂ ದುಡಿಯುತ್ತಿದ್ದಾರೆ. ತಾಯ್ನಾಡಿಗೆ ಬರಲು ತಯಾರಾಗಿರುವ ಇವರನ್ನು ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ ಎಂದು ಕೆಪಿಸಿಸಿ ಯ ಮಾಜಿ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಟಿ.ಎಂ.ಶಾಹಿದ್ ತೆಕ್ಕಿಲ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊರೋನಾ ಸೋಂಕಿನ ಆತಂಕದಿಂದ ಇಡೀ ವಿಶ್ವವೇ ಆತಂಕಕ್ಕೆ ಸಿಲುಕಿದ್ದು, ವಿದೇಶಗಳ್ಲಿ ಸಿಲುಕಿರುವ ಕನ್ನಡಿಗರು ತಾಯ್ನಾಡಿಗೆ ಮರಳಲು ಪರದಾಡುತಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಸಾರಿಗೆ ಸಂಪರ್ಕ ಕಲ್ಪಿಸದೆ ಇರುವುದರಿಂದ ಕನ್ನಡಿಗರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಆರೋಪಿಸಿದ್ದಾರೆ. ದುಬೈಯಿಂದ ಮಂಗಳೂರಿಗೆ ಆಗಮಿಸಿದ ಕರಾವಳಿ ಭಾಗದವರಿಗೆ ಕೊರಂಟೈನ್ ವ್ಯವಸ್ಥೆ ಮತ್ತು ವಾಹನದ ಸೌಲಭ್ಯವನ್ನು ಮಾಡಿಲ್ಲ್ಲ. ವಿಮಾನಯಾನದ ಟಿಕೆಟ್ ದರವನ್ನು ಹೆಚ್ಚಿಗೆ ಪಡೆಯಲಾಗಿದೆ. ವಿಮಾನ ಹಾಗೂ ರೈಲ್ವೆ ನಿಲ್ದಾಣದಲ್ಲಿ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿಲ್ಲ.
ಹೊರ ರಾಜ್ಯದಲ್ಲಿರುವ ಕಾರ್ಮಿಕರನ್ನು ಕರೆ ತರಲು ರಾಜ್ಯ ಸರ್ಕಾರ ಕಾಳಜಿ ತೋರುತ್ತಿಲ್ಲವೆಂದು ಶಾಹಿದ್ ಟೀಕಿಸಿದ್ದಾರೆ.
ವಿದೇಶದಿಂದ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದವರನ್ನು ನೆರೆಯ ಕೇರಳ ರಾಜ್ಯ ಸರ್ಕಾರ ಉತ್ತಮ ರೀತಿಯಲ್ಲಿ ನಡೆಸಿಕೊಂಡಿದೆ. ಬಂದವರಿಗೆ ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಸರ್ಕಾರವೇ ನೀಡಿದೆ. ಇಂದು ಕೇರಳ ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ ಎಂದು ಶಾಹಿದ್ ಹೇಳಿದ್ದಾರೆ.
ಆದರೆ ನಮ್ಮ ರಾಜ್ಯ ಸರ್ಕಾರ ಹೊರ ರಾಜ್ಯ ಮತ್ತು ಹೊರ ರಾಜ್ಯದಲ್ಲಿರುವ ಕನ್ನಡಿಗರ ಬಗ್ಗೆ ಕರುಣೆ ತೋರಿಲ್ಲವೆಂದು ಆರೋಪಿಸಿದ್ದಾರೆ. ಸರ್ಕಾರ ಇನ್ನಾದರೂ ಅನಿವಾಸಿ ಭಾರತೀಯರನ್ನು ಪ್ರೀತಿಯಿಂದ ಕಾಣಲಿ ಎಂದು ಅವರು ಒತ್ತಾಯಿಸಿದ್ದಾರೆ.