ಪ್ಯಾಕೇಜ್ ಕಾರ್ಯ ಯೋಜನೆ ಪ್ರಕಟ

May 14, 2020

ನವದೆಹಲಿ ಮೇ 13 : 25 ರಿಂದ 100 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಹೇಳಿದ್ದಾರೆ.
ಕೊವಿಡ್-19 ಸೋಂಕು ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ವಿಶೇಷ ಪ್ಯಾಕೇಜ್ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾಮನ್ ಅವರು ಇಂದು ಸಣ್ಣ, ಅತಿಸಣ್ಣ ಉದ್ಯಮಗಳು ಹಾಗೂ ಮತ್ತಿತರ ವಲಯಗಳ ಕಾರ್ಯ ಯೋಜನೆಗಳನ್ನು ಪ್ರಕಟಿಸಿದರು.
ಪ್ರಧಾನಿ ಮೋದಿ ಘೋಷಣೆ ಹಿನ್ನೆಲೆಯಲ್ಲಿ ಅವರು, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ-ಎಂಎಸ್‍ಎಂಇ ಉದ್ಯಮಗಳಿಗೆ ಯಾವುದೇ ಅಡಮಾನವಿಲ್ಲದೇ ಸ್ವಯಂಚಾಲಿತ ಸಾಲ ಸೌಲಭ್ಯ ಒದಗಿಸಲು 3 ಲಕ್ಷ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಎಂಎಸ್‍ಎಂಇ ಸೇರಿದಂತೆ ಉದ್ಯಮ ವಲಯಕ್ಕೆ ಹಲವು ವಿನಾಯಿತಿಗಳೊಂದಿಗೆ ತುರ್ತು ಸಾಲ ನೀಡಲಾಗುವುದು; ಸಾಲಮರುಪಾವತಿಗೆ 4 ವರ್ಷ ಕಾಲಾವಕಾಶ ನೀಡಲಾಗಿದ್ದು, ಮೊದಲ 12 ತಿಂಗಳ ಅವಧಿಯಲ್ಲಿ ಸಾಲ ಮರುಪಾವತಿಗೆ ವಿನಾಯಿತಿ ನೀಡಲಾಗಿದೆ ಎಂದರು.
ಸಂಕಷ್ಟದಲ್ಲಿರುವ ಎಂಎಸ್‍ಎಂಇಗಳಿಗಾಗಿ 20 ಸಾವಿರ ಕೋಟಿ ರೂಪಾಯಿ ಸಾಲಸೌಲಭ್ಯ ನಿಗದಿಪಡಿಸಲಾಗಿದ್ದು, ಇದರಿಂದ ಸುಮಾರು 2 ಲಕ್ಷ ಎಂಎಸ್‍ಎಂಇ ಘಟಕಗಳು ಲಾಭ ಪಡೆಯಲಿವೆ ; ಅಭಿವೃದ್ಧಿ ಸಾಮಥ್ರ್ಯ ಇರುವ ಎಂಎಸ್‍ಎಂಇಗಳಿಗೆ 50 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.