300 ಕಿ.ಮೀ ನಡೆದು ಕಾರ್ಮಿಕ ಸಾವು

14/05/2020

ಹೈದರಾಬಾದ್ ಮೇ 13 : ಕೊವಿಡ್-19 ಲಾಕ್ ಡೌನ್ ಪರಿಣಾಮ 21 ವರ್ಷದ ವಲಸೆ ಕಾರ್ಮಿಕನೊಬ್ಬ ಒಡಿಶಾವನ್ನು ತಲುಪಲು ಮೂವರು ಸ್ನೇಹಿತರೊಂದಿಗೆ ಹೈದರಾಬಾದ್ ನಿಂದ 300 ಕಿ.ಮೀ ನಡೆದು, ಭದ್ರಾಚಲಂನಲ್ಲಿ ನಡೆದ ಬಿಸಿಲಿನ ತಾಪದಿಂದ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಭಾನುವಾರ ಹೈದರಾಬಾದ್ ನಿಂದ ಹೊರಟ ಈ ಕಾರ್ಮಿಕರು, ಒಡಿಶಾದ ಮಲ್ಕನಗಿರಿ ತಲುಪಬೇಕಿತ್ತು. ಆದರೆ ಮಂಗಳವಾರ ಭದ್ರಾಚಲಂ ತಲುಪುತ್ತಿದ್ದಂತೆ ಓರ್ವ ಕಾರ್ಮಿಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ವಾಂತಿಯಾಗಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ಆತನ ಸ್ನೇಹಿತರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದಾರಿ ಮಧ್ಯೆಯೇ ಕಾರ್ಮಿಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಸಿಲಿನ ಹೊಡೆತದಿಂದ ಕಾರ್ಮಿಕ ಮೃತಪಟ್ಟಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.