ಸೇನಾಪಡೆ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತು

14/05/2020

ನವದೆಹಲಿ ಮೇ 13 : ಜೂನ್ 1ರಿಂದ ಅರೆ ಸೇನಾಪಡೆ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.
ನಿನ್ನೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಜನರು ಇನ್ನು ಮುಂದೆ ಆತ್ಮ ನಿರ್ಭಾರ್ ಭಾರತ್ ಅಥವಾ ಸ್ವಾವಲಂಬನೆ ಮತ್ತು ಸ್ಥಳೀಯತೆಗೆ ಆದ್ಯತೆ ಕೊಡಬೇಕೆಂದು ಒತ್ತಿ ಹೇಳಿದ್ದರು. ಅಂದರೆ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ವಸ್ತುಗಳಿಗೆ ಜನರು ಉತ್ತೇಜನ ಕೊಡಬೇಕೆಂಬುದು ಅವರ ಮಾತಿನ ಅರ್ಥವಾಗಿತ್ತು.
ಈ ಕುರಿತು ಇಂದು ಟ್ವೀಟ್ ಮಾಡಿರುವ ಗೃಹ ಸಚಿವ ಅಮಿತ್ ಶಾ, ನಿನ್ನೆ ಮೋದಿಯವರು ಭಾಷಣ ಮಾಡುತ್ತಿದ್ದಾಗ ಜನರು ಸ್ವಾವಲಂಬಿಗಳಾಗಬೇಕು ಮತ್ತು ಸ್ಥಳೀಯ ವಸ್ತುಗಳಿಗೆ ಆದ್ಯತೆ ಕೊಡಬೇಕು ಎಂದು ಹೇಳಿದ್ದರು. ಇದರಿಂದ ಮುಂದಿನ ದಿನಗಳಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ನಾಯಕತ್ವದತ್ತ ಕೊಂಡೊಯ್ಯಲಿದೆ.
ಈ ನಿಟ್ಟಿನಲ್ಲಿ ಗೃಹ ಸಚಿವಾಲಯ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ. ಇದು ಜೂನ್ 1ರಿಂದ ಅನ್ವಯವಾಗಲಿದೆ. ಸುಮಾರು 10 ಲಕ್ಷ ಸಿಎಪಿಎಫ್ ಸಿಬ್ಬಂದಿ ಮತ್ತು 50 ಲಕ್ಷ ಅವರ ಕುಟುಂಬ ಸದಸ್ಯರು ಸ್ವದೇಶಿ ವಸ್ತುಗಳನ್ನು ಬಳಸಲಿದ್ದಾರೆ ಎಂದು ತಿಳಿಸಿದ್ದಾರೆ.