ಜಿಲ್ಲಾ ಮಟ್ಟದ ಸಮಿತಿ ಸಭೆ : ಹೂವು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮೇ 26 ಕಡೆ ದಿನ

14/05/2020

ಮಡಿಕೇರಿ ಮೇ.14 : ವಿವಿಧ ರೀತಿಯ ಹೂವು ಬೆಳೆದಿರುವ ಬೆಳೆಗಾರರು ಮೇ 26 ರೊಳಗೆ ತಮ್ಮ ವ್ಯಾಪ್ತಿಯ ನಾಡ ಕಚೇರಿ ಅಥವಾ ತಾಲ್ಲೂಕು ತೋಟಗಾರಿಕಾ ಇಲಾಖೆ ಕಚೇರಿಗೆ ‘ಹೂವು ಬೆಳೆ ಪರಿಹಾರ’ ಸಂಬಂಧ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆ ಲಾಕ್‍ಡೌನ್‍ನಿಂದಾಗಿ ಹೂ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿರುವುದರಿಂದ ಹೂವು ಬೆಳೆಗಾರರಿಂದ ಅರ್ಜಿ ಆಹ್ವಾನಿಸಲು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹೂ ಬೆಳೆಗಾರರಿಗೆ ಒಂದು ಎಕರೆಗೆ 10 ಸಾವಿರ ರೂ. ಹಾಗೂ ಒಂದು ಹೆಕ್ಟೇರ್‍ಗೆ ಅಥವಾ ಗರಿಷ್ಠ 25 ಸಾವಿರ ರೂ. ಸಹಾಯಧನವನ್ನು ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಈಗಾಗಲೇ ಹೂವು ಬೆಳೆ ಸಮೀಕ್ಷೆಯಾಗಿದ್ದಲ್ಲಿ ಅದನ್ನು ಪರಿಗಣಿಸುವುದು. ಸಮೀಕ್ಷೆಯಾಗದಿದ್ದಲ್ಲಿ ಸಮೀಕ್ಷೆ ನಡೆಸಿ ಅರ್ಹ ಕೃಷಿಕರಿಗೆ ಪರಿಹಾರ ಕಲ್ಪಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ್ ಅವರು ಮಾಹಿತಿ ನೀಡಿ ಅಲ್ಪಾವಧಿ ಬೆಳೆಗಳಾದ ಚೆಂಡು ಹೂವು, ಸೇವಂತಿಗೆ, ಆಸ್ಟರ್. ಬಹುವಾರ್ಷಿಕ ಬೆಳೆಗಳಾದ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್ ಆಫ್ ಪ್ಯಾರಡೈಸ್. ಸಂರಕ್ಷಿತ ಬೇಸಾಯದಲ್ಲಿ ಬೆಳೆಯುವ ಬೆಳೆಗಳಾದ ಗುಲಾಬಿ, ಜರ್ಬೆರಾ, ಕಾರ್ನೇಷನ್, ಆರ್ಕಿಡ್, ಆಂಥೋರಿಯಂ ಮತ್ತಿತರ ಪುಷ್ಪ ಬೆಳೆಗಳಿಗೆ ಪರಿಹಾರ ದೊರೆಯಲಿದೆ. ಪ್ರತಿ ಫಲಾನುಭವಿಗಳಿಗೆ ಗರಿಷ್ಠ 1 ಹೆಕ್ಟೇರ್ ಪ್ರದೇಶಕ್ಕೆ 25 ಸಾವಿರ ರೂ ಮೀರದಂತೆ ಅಥವಾ ಹೂ ಬೆಳೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಸಹಾಯಧನ ದೊರೆಯಲಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು.
ಫಲಾನುಭವಿಗಳ ಆಯ್ಕೆ ಮತ್ತು ಅರ್ಹತೆ: 2019-20 ನೇ ಸಾಲಿನ ಹೂವು ಬೆಳೆಗಳಿಗೆ ಹಿಂಗಾರು ಬೆಳೆ ಸಮೀಕ್ಷೆಯನ್ನು ಆಧಾರವಾಗಿಸಿಕೊಳ್ಳುವುದು ಮತ್ತು ಬಹುವಾರ್ಷಿಕ ಬೆಳೆಗಳಿಗೆ 2019-20 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯನ್ನು ಆಧಾರವಾಗಿರಿಸಿಕೊಳ್ಳುವುದು.
ಮಾರ್ಚ್ 24 ರ ನಂತರ ನಾಟಿ ಮಾಡಿದ ಬೆಳೆಗಳನ್ನು ಪರಿಗಣಿಸುವುದಿಲ್ಲ, ಬೆಳೆ ಸಮೀಕ್ಷೆಯಲ್ಲಿ ನಮೂದಾಗದೆ ಇರುವ ಹೂವು ಬೆಳೆಗಾರರಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಪಡೆಯುವುದು ಹಾಗೂ ಈಗಾಗಲೇ ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ರೈತರಿಂದ ಯಾವುದೇ ದಾಖಲಾತಿಗಳನ್ನು ಪಡೆಯುವಂತೆ ಇಲ್ಲ, ಫಲಾನುಭವಿಯು ಹೂವು ಬೆಳೆಗಾರರಾಗಿದ್ದು, ಕಡ್ಡಾಯವಾಗಿ ಆರ್‍ಟಿಸಿ ಅವರ ಹೆಸರಿನಲ್ಲಿ ಇರಬೇಕು.
ಜಂಟಿ ಖಾತೆಯಿದ್ದಲ್ಲಿ ಒಪ್ಪಿಗೆ ಪತ್ರ ಪಡೆಯಬೇಕು, ಆರ್‍ಟಿಸಿ ದಾರರು ಮರಣ ಹೊಂದಿದಲ್ಲಿ ಅವರ ಕುಟುಂಬದವರಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಸಹಾಯಧನ ವಿತರಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್ ಅವರು ಮಾಹಿತಿ ನೀಡಿದರು.
ಅರ್ಜಿಯ ವಿವರಣೆ ಪಡೆಯಬೇಕಾಗಿರುವ ವಿವರಗಳು: ಅರ್ಜಿ ನಮೂನೆ, ಆರ್‍ಟಿಸಿ ಯ ಮೂಲ ಪ್ರತಿ, ಸ್ವಯಂ ಘೋಷಿತ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರಣೆ ನೀಡಬೇಕು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್ (9448999227), ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್-9448336863 (ಮಡಿಕೇರಿ), ಶರತ್-8553933357 (ಸೋಮವಾರಪೇಟೆ), ದೀನಾ-9448049020 (ವೀರಾಜಪೇಟೆ) ಇವರನ್ನು ಸಂಪರ್ಕಿಸಬಹುದಾಗಿದೆ.
ತಹಶೀಲ್ದಾರರಾದ ಮಹೇಶ್, ಗೋವಿಂದ ರಾಜು, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಪ್ರಮೋದ್, ಡೀನಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಕುಮಾರ್ ಪಾಟೀಲ್ ಇತರರು ಇದ್ದರು.