ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ಸಂಘಟನೆ ಒತ್ತಾಯ

15/05/2020

ಮಡಿಕೇರಿ ಮೇ 14 : ಕೊರೋನ ವೈರಸ್ ಹರಡದಂತೆ ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್‍ಗಳಿಗೆ ಕಂಟೈನ್ ಮೆಂಟ್ ಮತ್ತು ಕೆಂಪು ಹಾಗೂ ಹಳದಿ ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಸುರಕ್ಷತೆಗಾಗಿ ಪಿ.ಪಿ.ಇ ಕಿಟ್‍ಗಳನ್ನು ವಿತರಿಸಬೇಕು, ಕೊರೋನಾ ವಿರುದ್ಧ ಹೋರಾಡುತ್ತಿರುವ ಎಲ್ಲಾ ನೌಕರರು ಮತ್ತು ಕಾರ್ಮಿಕರಿಗೆ ಆಗಿಂದಾಗ್ಗೆ ಉಚಿತ ಕೋವಿಡ್ 19 ಪರೀಕ್ಷೆ ಮಾಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಕುಶಾಲನಗರದಲ್ಲಿ ಸಿಐಟಿಯು ಸಂಘಟನೆಯ ಸೋಮವಾರಪೇಟೆ ತಾಲ್ಲೂಕು ಸಮಿತಿ ಸೋಮವಾರಪೇಟೆ ಉಪ ತಹಶೀಲ್ದಾರ್ ರ ಮೂಲಕ ಸರ್ಕಾರಕ್ಕೆ ಮನವಿ ನೀಡಿದೆ.
ರೂ. 50 ಲಕ್ಷ ವಿಮೆಯನ್ನು ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದವರಿಗೆ ಮತ್ತು ಅವರ ಇಡೀ ಕುಟುಂಬದ ಸದಸ್ಯರಿಗೂ ಜಾರಿ ಮಾಡಬೇಕು, ಕೊರೋನಾ ಕರ್ತವ್ಯದಲ್ಲಿರುವ ಎಲ್ಲಾ ಇಲಾಖೆಯ ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸ್ಕೀಂ ನೌಕರರಿಗೆ ಮತ್ತು ಮುನಿಸಿಪಾಟಿ ಹಾಗೂ ಗ್ರಾ.ಪಂ. ನೌಕರರಿಗೆ ಹೆಚ್ಚುವರಿಯಾಗಿ ಪ್ರತೀ ತಿಂಗಳು ರೂ. 25 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಸಮಿತಿಯ ಸಂಚಾಲಕ ಪಿ.ಆರ್.ಭರತ್ ಒತ್ತಾಯಿಸಿದರು.
ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ರೂ. 7500 ನೀಡಬೇಕು, ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಜಿಡಿಪಿಯ ಕನಿಷ್ಟ ಶೇ. 5 ರಷ್ಟನ್ನು ಸಾರ್ವಜನಿಕ ಆರೋಗ್ಯ ವಲಯಕ್ಕೆ ಮೀಸಲೀಡಬೇಕು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಖಾಸಗೀಕರಣವನ್ನು ನಿಲ್ಲಿಸಿ, ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಶಾಸನವನ್ನು ರಚಿಸಬೇಕು, ಮೇ 10 ರಂದು ಮೃತರಾದ ಆಶಾ ಕಾರ್ಯಕರ್ತೆಯ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡಬೇಕು, ಹೊರ ರಾಜ್ಯಗಳ ವಲಸೆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಉಚಿತ ಮತ್ತು ಸುರಕ್ಷಿತ ಪ್ರಯಾಣದ ವ್ಯವಸ್ಥೆಯನ್ನು ಕೂಡಲೇ ಒದಗಿಸಬೇಕು ಮತ್ತು ಅಗತ್ಯವಿರುವವರಿಗೆ ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಅಥವಾ ತಹಶಿಲ್ದಾರ್ ಅವರ ಮೂಲಕ ಸರ್ಕಾರವೇ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ವಿಜಯ್, ಬಿಸಿಯೂಟ ನೌಕರರ ಸಂಘದ ಕಾವೇರಿ, ತಲೆಹೊರೆ ಕಾರ್ಮಿಕರ ಸಂಘದ ಪಿ.ಎಂ. ರಾಜನ್, ಅಂಗನವಾಡಿ ನೌಕರರ ಸಂಘದ ಜಮುನಾ ಸೇರಿದಂತೆ ಸರ್ಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳ ಸಂಘದ ಶಾರದಮ್ಮ ಹಾಗೂ ಮತ್ತಿತರರು ಹಾಜರಿದ್ದರು.