ಅಗತ್ಯ ದಾಖಲೆ ಒದಗಿಸಲು ಕಟ್ಟಡ ಕಾರ್ಮಿಕರಲ್ಲಿ ಮನವಿ

15/05/2020

ಮಡಿಕೇರಿ ಮೇ 14 : ಜಿಲ್ಲೆಯಲ್ಲಿ 4,750 ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಸಿದ್ದು, ಇವರಲ್ಲಿ ಒಂದು ಸಾವಿರ ಮಂದಿ ಹೊರ ರಾಜ್ಯದ ಕಾರ್ಮಿಕರೂ ಹೆಸರು ನೋಂದಾಯಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಅಗತ್ಯ ದಾಖಲಾತಿ ಸಲ್ಲಿಸಿರುವ ಕಟ್ಟಡ ಕಾರ್ಮಿಕರಿಗೆ ಒಂದು ಬಾರಿಗೆ 5 ಸಾವಿರ ರೂ.ಗಳ ಸಹಾಯಧನ ಕಾರ್ಮಿಕರ ಖಾತೆಗಳಿಗೆ ಜಮೆಯಾಗುತ್ತಿದೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ ಯತ್ನಟ್ಟಿ ಅವರು ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಕಾರ್ಮಿಕರ ಕುಂದುಕೊರತೆ ಬಗ್ಗೆ ಗುರುವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾಹಿತಿ ನೀಡಿದರು.
ಕುಶಾಲನಗರದಿಂದ ಕಟ್ಟಡ ಕಾರ್ಮಿಕರಾದ ವೆಂಕಟೇಶ್ ಅವರು ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ 5 ಸಾವಿರ ರೂ. ಸಹಾಯಧನ ನೀಡುತ್ತಿದ್ದು, ತಮ್ಮ ಖಾತೆಗೆ ಇನ್ನೂ ಹಣ ಜಮೆಯಾಗಿಲ್ಲ ಎಂದು ಗಮನ ಸೆಳೆದರು.
ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಮಿಕರು ಕರೆ ಮಾಡಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಖಾಸಗಿ ಬಸ್ ನಿರ್ವಾಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್ ಅವರು ಕರೆ ಮಾಡಿ, ಸರ್ಕಾರ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸಹಾಯಧನ ಘೋಷಣೆ ಮಾಡಿದ್ದು, ನಮಗೂ ಈ ಸಹಾಯಧನ ದೊರೆಯಲಿದೆಯೇ ಎಂದು ಪ್ರಶ್ನಿಸಿದರು.
ಈ ಕುರಿತು ಮಾಹಿತಿ ನೀಡಿದ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ಸರ್ಕಾರ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರವೇ ಈ ಸಹಾಯಧನದ ಘೋಷಣೆ ಮಾಡಿದೆ. ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಸಹಾಯಧನದ ಬಗ್ಗೆ ಯಾವುದೇ ಘೋಷಣೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ವೀರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆಯಿಂದ ರಾಜು ಅವರು ಕರೆಮಾಡಿ ಎಸ್ಟೇಟ್ ಒಂದರಲ್ಲಿ ತಾವು ವಾಹನ ಚಾಲಕರಾಗಿದ್ದು ಸರ್ಕಾರದ ನಿಯಮಾವಳಿಯ ಪ್ರಕಾರ ವಾಹನ ಚಾಲಕರಿಗೆ ನೀಡಬೇಕಾಗಿರುವ ವೇತನ ಎಷ್ಟಿದೆ ಎಂದು ಪ್ರಶ್ನಿಸಿದರು.
ಮಡಿಕೇರಿಯ ಹಿರಿಯ ಕಾರ್ಮಿಕ ನಿರೀಕ್ಷಕರು ಸರ್ಕಾರದ ನಿಯಮಾವಳಿಯಂತೆ ಪಾವತಿಸಬೇಕಾಗಿರುವ ವೇತನದ ಮಾಹಿತಿಯನ್ನು ನೀಡಿದರು.
ಸೋಮವಾರಪೇಟೆಯ ಮಾದಾಪುರದಿಂದ ಬಿಹಾರದ ವಲಸೆ ಕಾರ್ಮಿಕರಾದ ರಿತುರಾಜ್ ಥಾನಿ ಎಂಬುವವರು ಕರೆ ಮಾಡಿ, ಮಾದಪುರದಲ್ಲಿ 16 ಜನ ಬಿಹಾರ ಮೂಲದ ಕಾರ್ಮಿಕರು ಒಂದುಕಡೆ ವಾಸವಿದ್ದು, ಬಿಹಾರಕ್ಕೆ ತೆರಳಲು ಅವಕಾಶ ನೀಡುವಂತೆ ಕೋರಿದರು.
ಇದಕ್ಕೆ ಮಾಹಿತಿ ನೀಡಿ ಸೇವಾ ಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿ, ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ಆಧಾರ್ ಮುಂತಾದ ಅಗತ್ಯ ದಾಖಲೆಗಳನ್ನು ನೀಡುವಂತೆ ತಿಳಿಸಿದರು. ಜೊತೆಗೆ ಬಿಹಾರ ರಾಜ್ಯದಿಂದ ಅನುಮತಿ ದೊರೆತ ಕೂಡಲೇ 16 ಜನ ಕಾರ್ಮಿಕರನ್ನು ಸ್ವಂತ ಜಿಲ್ಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ಜಿಲ್ಲಾ ಕಾರ್ಮಿಕ ಇಲಾಖೆ ವತಿಯಿಂದ ಈಗಾಗಲೇ ಅರ್ಜಿ ಸಲ್ಲಿಸಿರುವವರ ವಿವರಗಳನ್ನು ಕೇಂದ್ರ ಕಚೇರಿಗೆ ನೀಡಲಾಗಿದ್ದು, ಅರ್ಜಿದಾರರು ನೀಡಿರುವ ಮಾಹಿತಿಗಳು ಸೂಕ್ತವಾಗಿದ್ದಲ್ಲಿ ಅಂತಹ ಅರ್ಜಿದಾರರ ಖಾತೆಗೆ ಹಣ ಜಮೆಯಾಗಲಿದೆ ಎಂದು ಅವರು ತಿಳಿಸಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಸೀರಜ್ ಅಹಮ್ಮದ್, ಕಾರ್ಮಿಕ ಇಲಾಖೆಯ ಲಕ್ಷ್ಮೀಶ್ ಇತರರು ಹಾಜರಿದ್ದರು.