ಮಂಜೇಶ್ವರ ಕನ್ನಡ ಅಲ್ಪಸಂಖ್ಯಾತ ಪ್ರದೇಶ

May 15, 2020

ಕಾಸರಗೋಡು ಮೇ 14 : ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ವ್ಯಾಪ್ತಿಯ ಪ್ರದೇಶವನ್ನು “ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ” ಎಂಬುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಮಂಜೇಶ್ವರ ತಾಲ್ಲೂಕಿಗೆ ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಸ್ಥಾನಮಾನವನ್ನು ನೀಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡವನ್ನು ವಿಭಜಿಸುವ ಮೂಲಕ ಮಂಜೇಶ್ವರನನ್ನು ಪ್ರತ್ಯೇಕ ತಾಲೂಕಾಗಿ ಮಾಡಲಾಗಿತ್ತಾದರೂ ಆ ವೇಳೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ಮಂಜೇಶ್ವರಕ್ಕೆ ನೀಡಲಾಗಿರಲಿಲ್ಲ. ಇದರಿಂದಾಗಿ ಅಲ್ಲಿನ ಕನ್ನಡಿಗರು ಕೆಲ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರದೇಶ ಕರ್ನಾಟಕ ಸಮಿತಿಯ ಅಧ್ಯಕ್ಷ ಮತ್ತು ವಕೀಲ ಕೆ ಎಂ ಬಳ್ಳಕುರಾಯ2014 ರಲ್ಲಿಯೇ ಮಂಜೇಶ್ವರ ತಾಲ್ಲೂಕಿಗೆ ಈ ಸ್ಥಾನಮಾನ ನೀಡುವ ಕುರಿತು ಹೋರಾಟಕ್ಕೆ ಮುಂದಾಗಿದ್ದರು. ಈ ಬೇಡಿಕೆಯನ್ನು ಜಿಲ್ಲಾಧಿಕಾರಿ ಮತ್ತು ರಾಜ್ಯ ಅಲ್ಪಸಂಖ್ಯಾತರ ಸಮಿತಿಯೊಂದಿಗೆ ಸಕ್ರಿಯವಾಗಿ ಚರ್ಚಿಸಲಾಗಿ ಇದರ ಸಂಬಂಧ ಪ್ರತಿಭಟನೆ, ಮುಷ್ಕರಗಳು ಸಹ ನಡೆದಿದ್ದವು.