ಕ್ವಾರಂಟೈನ್ ವಿರೋಧಿಸಿ ಪ್ರತಿಭಟನೆ

15/05/2020

ಬೆಂಗಳೂರು ಮೇ 14 : ದೆಹಲಿಯಿಂದ ಗುರುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ ವಿರೋಧಿಸಿ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಸುಮಾರು 51 ದಿನಗಳ ಬಳಿಕ ಲಾಕ್ ಡೌನ್ ನಲ್ಲಿ ಸಿಲುಕಿರುವ ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಮಂಗಳವಾರದಿಂದ ರೈಲ್ವೆ ಇಲಾಖೆ ಸೀಮಿತ ರೈಲು ಸೇವೆ ಆರಂಭಿಸಿದ್ದು, ದೆಹಲಿಯಿಂದ ಹೊರಟ ನವದೆಹಲಿ – ಕೆಎಸ್ ಆರ್ ಬೆಂಗಳರೂ ಸೂಪರ್ ಫಾಸ್ಟ್ ರೈಲು ಇಂದು ಬೆಳಗ್ಗೆ 7.16ಕ್ಕೆ ನಗರ ರೈಲ್ವೆ ನಿಲ್ದಾಣ ತಲುಪಿದೆ.
ಮೆಜೆಸ್ಟಿಕ್ ಆಗಮಿಸಿದ ಸುಮಾರು 681 ಪ್ರಯಾಣಿಕರಿಗೆ ಹೋಟೆಲ್ ಅಥವಾ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಗಾಗಬೇಕೆಂದು ಸೂಚಿಸಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಯಾಣಿಕರು, ತಮಗೆ ಸರ್ಕಾರ ಮೊದಲೇ ಮಾಹಿತಿ ನೀಡಿಲ್ಲ. ನಾವು ಹೋಮ್ ಕ್ವಾರಂಟೈನ್ ಗೆ ಒಳಗಾಗುತ್ತೇವೆ. ಸಾಂಸ್ಥಿಕ ಕ್ವಾರಂಟೈನ್‍ಮಾಡುವುದಾಗಿದ್ದರೆ ನಾವು ಇಲ್ಲಿಗೆ ಬರುತ್ತಿರಲಿಲ್ಲ ಎಂದು ವಾದಿಸಿದ್ದಾರೆ.
ಈ ವೇಳೆ ಅಧಿಕಾರಿಗಳು ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ ವಿರೋಧಿಸಿ ಸುಮಾರು ಆರು ಗಂಟೆಗಳ ಕಾಲ ರೈಲು ನಿಲ್ದಾಣದ ವೇಟಿಂಗ್ ರೂಂನಲ್ಲಿ ಪ್ರತಿಭಟನೆ ನಡೆಸಿದರು.