ಎಪಿಎಂಸಿ ಕಾಯ್ದೆಗೆ ದೇವೇಗೌಡ ವಿರೋಧ

15/05/2020

ಬೆಂಗಳೂರು ಮೇ 14 : ಇಡೀ ರಾಜ್ಯ ಕೊರೊನಾ ವಿರುದ್ಧ ಸಮರ ನಡೆಸುತ್ತಿರುವ ಈ ಸಮಯದಲ್ಲಿ ಸುಗ್ರೀವಾಜ್ಞೆಯ ಮೂಲಕ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಲು ಹೊರಟಿರುವುದು ರೈತ ವಿರೋಧಿ ಧೋರಣೆ ಎಂದು ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡ ಟೀಕಿಸಿದ್ದಾರೆ.
ಎಪಿಎಂಸಿಯ ಕಾಯಿದೆಯನ್ನು ತಿದ್ದುಪಡಿಯ ಮೂಲಕ ದುರ್ಬಲಗೊಳಿಸಿದರೆ ರೈತರು ಶೋಷಣೆಗೊಳಗಾದಾಗ ಯಾವುದೇ ರಕ್ಷಣೆ ನೀಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಈ ರೀತಿ ಏಕಾಏಕಿ ತೀರ್ಮಾನ ಕೈಗೊಂಡರೆ ರೈತರು ಸಂಕಷ್ಟಕ್ಕೀಡಾಗಲಿದ್ದಾರೆ. ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಎಪಿಎಂಸಿ ಕಾಯ್ದೆ ರೈತರಿಗೆ ತಕ್ಕ ಮಟ್ಟಿನ ರಕ್ಷಣೆ ನೀಡಿತ್ತು. ಆದರೆ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಯಾದರೆ ಬಂಡವಾಳಶಾಹಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಂದ ರೈತರು ಶೋಷಣೆಗೊಳಗಾಗುವ ಅಪಾಯವಿದೆ. ಹೀಗಾಗಿ ಕಾಯಿದೆಗೆ ತಿದ್ದುಪಡಿ ತರುವುದನ್ನು ಸರ್ಕಾರ ಕೈಬಿಡಬೇಕು ಎಂದು ಹೇಳಿದ್ದಾರೆ.