ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಎಂಎಲ್‍ಸಿ ವೀಣಾಅಚ್ಚಯ್ಯ ಒತ್ತಾಯ

15/05/2020

ಮಡಿಕೇರಿ ಮೇ 15 : ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾನಿಯಿಂದ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿರುವ ಜಿಲ್ಲೆಯ ಜನ ಇದೀಗ ಕೊರೋನಾ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೊಡಗನ್ನು ವಿಶೇಷವಾಗಿ ಪರಿಗಣಿಸಿ ವಿಶೇಷ ಪ್ಯಾಕೇಜಿನ ಮೂಲಕ ಹೆಚ್ಚಿನ ಆರ್ಥಿಕ ನೆರವನ್ನು ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2018 ಮತ್ತು 2019ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಕೊಡಗಿನ ಜನ ಸಾಮಾನ್ಯರು, ರೈತರು ಹಾಗೂ ಬೆಳೆಗಾರರು ಅನೇಕ ರೀತಿಯಲ್ಲಿ ಕಷ್ಟಕ್ಕೆ ಸಿಲುಕಿಕೊಂಡು ಇಲ್ಲಿಯವರೆಗೆ ಚೇತರಿಸಿಕೊಂಡಿಲ್ಲ. ಇದರ ನಡುವೆಯೇ ಕೊರೋನಾ ಲಾಕ್‍ಡೌನ್ ಜಾರಿಯಾಗಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿಯೇ ಸಂಪೂರ್ಣವಾಗಿ ಬುಡ ಮೇಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ಮಳೆಗಾಲ ಜಿಲ್ಲೆಯನ್ನು ಪ್ರವೇಶಿಸಲಿದ್ದು, ರೈತರು, ಬೆಳೆಗಾರರು ಸೇರಿದಂತೆ ಎಲ್ಲಾ ವರ್ಗದ ಜನ ಆತಂಕದಲ್ಲಿದ್ದಾರೆ. ಆದ್ದರಿಂದ ಕೊಡಗಿನ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಅತಿವೃಷ್ಟಿ ಹಾನಿ ಮತ್ತು ಕೊರೋನಾ ಲಾಕ್‍ಡೌನ್ ಸಂಕಷ್ಟದ ನಡುವೆಯೇ ರೈತರು ಹಾಗೂ ಬೆಳೆಗಾರರಿಗೆ ಸಂಬಂಧಿಸಿದ ವಿಚಾರದಲ್ಲಿ ಹೊಸ ಹೊಸ ಕಾನೂನು, ಕಾಯ್ದೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿರುವುದು ಖಂಡನೀಯ. ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗಲೇ ಸಹಕಾರ ಸಂಘಗಳು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತ ವಿರೋಧಿ ನೀತಿಯಾಗಿದೆ.
ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಿದ್ದ ಸರ್ಕಾರ ಇದೀಗ ವಸೂಲಾತಿ ಸಂದರ್ಭ ಶೇ.7 ರಷ್ಟು ಬಡ್ಡಿ ಪಾವತಿಸಬೇಕೆಂದು ನಿಯಮ ಜಾರಿ ಮಾಡಿರುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಇದು ರೈತರು ಹಾಗೂ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಹುನ್ನಾರವಾಗಿದೆ. ಶೂನ್ಯ ಬಡ್ಡಿದರದ ಹಳೆಯ ಸಾಲಕ್ಕೆ ಶೇ. 7 ರಷ್ಟು ಬಡ್ಡಿ ವಸೂಲಿ ಮಾಡುವ ಕ್ರಮವನ್ನು ಕೈಬಿಟ್ಟು ಹೊಸ ಸಾಲಕ್ಕೆ ಹೊಸ ನಿಯಮವನ್ನು ಜಾರಿಗೊಳಿಸಲಿ ಎಂದು ವೀಣಾಅಚ್ಚಯ್ಯ ಆಗ್ರಹಿಸಿದರು.
ಪಡಿತರ ಚೀಟಿ ಇರುವವರಿಗೆ ಮಾತ್ರ ಸಾಲ ನೀಡಲಾಗುವುದೆಂದು ಸರ್ಕಾರ ಹೇಳಿದೆ. ಆದರೆ ಒಂದೇ ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರುಗಳ ಹೆಸರಿದ್ದು, ಪ್ರತ್ಯೇಕವಾಗಿ ತಮ್ಮ ತಮ್ಮ ಹೆಸರಿಗೆ ಸೇರಿದ ಭೂಮಿಯಲ್ಲಿ ಕೃಷಿ ಮಾಡುವ ಅನೇಕ ಕುಟುಂಬಗಳು ಕೊಡಗು ಜಿಲ್ಲೆಯಲ್ಲಿವೆ. ಸರ್ಕಾರ ಪಡಿತರ ಚೀಟಿ ಇರುವವರಿಗೆ ಮಾತ್ರ ಸಾಲ ನೀಡಲು ಮುಂದಾದರೆ ಉಳಿದ ರೈತರಿಗೆ ಅನ್ಯಾಯವಾಗಲಿದೆ. ಇತ್ತೀಚಿಗೆ ಜಾರಿಗೆ ಬಂದಿರುವ ಸರ್ಕಾರದ ಹೊಸ ನಿಯಮಗಳು ರೈತರನ್ನು ಸಂಪೂರ್ಣವಾಗಿ ಗೊಂದಲದಲ್ಲಿ ಸಿಲುಕಿಸಿದೆ ಎಂದು ಟೀಕಿಸಿದರು.
ಡಿಸಿಸಿ ಬ್ಯಾಂಕ್‍ನಲ್ಲಿ ರುಪೇ ಕಾರ್ಡ್ ಮೂಲಕ ಸಾಲ ನೀಡಲಾಗುವುದೆಂದು ಘೋಷಿಸುವ ಮೂಲಕ ರೈತರು ಹಾಗೂ ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಲಾಗಿದೆ. ಅಲ್ಲದೇ ಡಿಸಿಸಿ ಬ್ಯಾಂಕ್ ಹೊರತು ಪಡಿಸಿದಂತೆ ಬೇರೆ ಯಾವುದೇ ಬ್ಯಾಂಕ್‍ನಲ್ಲಿ ಸಾಲ ಪಡೆಯುವಂತಿಲ್ಲ ಎಂದು ಸೂಚಿಸಲಾಗಿದೆ. ಕೇವಲ 3 ಲಕ್ಷ ರೂ. ಸಾಲಕ್ಕಾಗಿ ರೈತರು ಡಿಸಿಸಿ ಬ್ಯಾಂಕ್‍ಗೆ 100 ದಿನ ಅಲೆಯಬೇಕೇ ಎಂದು ಪ್ರಶ್ನಿಸಿದರು.
ಕೊರೋನಾ ಲಾಕ್‍ಡೌನ್ ನ ಸಂಕಷ್ಟದ ಪರಿಸ್ಥಿತಿಯ ನಡುವೆಯೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರಲಾಗಿದೆ. ಈ ಕಾಯ್ದೆ ಜಾರಿಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಹೊರತು ಬೇರೆ ಯಾವುದೇ ಲಾಭವಿಲ್ಲ. ಕಾಯ್ದೆ ಜಾರಿಗೆ ಮೊದಲು ಸರ್ಕಾರ ಅಧಿವೇಶನದಲ್ಲಿ ವಿಚಾರವನ್ನು ಮಂಡಿಸಿ ಚರ್ಚೆ ಮಾಡಬೇಕಾಗಿತ್ತು. ತರಾತುರಿಯಲ್ಲಿ ಕಾಯ್ದೆಯನ್ನು ಜಾರಿ ಮಾಡಿರುವುದನ್ನು ಗಮನಿಸಿದರೆ ಇದರಲ್ಲಿ ರೈತರಿಗೆ ಅನಾನುಕೂಲವೇ ಹೆಚ್ಚಾಗುವುದು ಸ್ಪಷ್ಟವಾಗುತ್ತಿದೆ. ಈ ಕಾಯ್ದೆಯ ವಿರುದ್ಧ ಮುಂದಿನ ದಿನಗಳಲ್ಲಿ ರೈತರು ಒಗ್ಗಟ್ಟಿನ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದರು.
::: ಸಂತ್ರಸ್ತರು ಅತಂತ್ರ :::
2018 ರಲ್ಲಿ ಅತಿವೃಷ್ಟಿಯಿಂದ ಮಡಿಕೇರಿ ತಾಲ್ಲೂಕಿನಲ್ಲಿ ಅನೇಕ ಕಷ್ಟ ನಷ್ಟ, ಸಾವುಗಳು ಸಂಭವಿಸಿದೆ. ಇದೇ ಪರಿಸ್ಥಿತಿ 2019ರಲ್ಲಿ ಇಡೀ ಕೊಡಗು ಜಿಲ್ಲೆಯಲ್ಲಿ ಕಂಡು ಬಂದಿದ್ದು, ಇದರ ಪರಿಣಾಮ ರೈತ ಸಮೂಹದ ಸ್ಥಿತಿ ಅಧೋಗತಿಗೆ ಇಳಿದಿದೆ. ಅತಿವೃಷ್ಟಿ ಹಾನಿ ಸಂಭವಿಸಿ ಇಷ್ಟು ದಿನಗಳೇ ಕಳೆದಿದ್ದರು ನೊಂದವರಿಗೆ ಇಲ್ಲಿಯವರೆಗೆ ತೃಪ್ತಿಯಾಗುವ ರೀತಿಯ ಪರಿಹಾರ ದೊರೆತ್ತಿಲ್ಲ. ನೂತನ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಕೂಡ ಪೂರ್ಣಗೊಳ್ಳದೆ ಸಂತ್ರಸ್ತರಿಗೆ ಹಸ್ತಾಂತರವಾಗಿಲ್ಲ.
2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಇಲ್ಲಿಯವರೆಗೆ ಜಾಗವನ್ನೇ ಗುರುತಿಸಿಲ್ಲ, ಬಾಡಿಗೆ ಮನೆಗಳಲ್ಲಿ ಆಶ್ರಯ ಪಡೆದವರಿಗೆ ಸರ್ಕಾರ ಬಾಡಿಗೆ ಹಣವನ್ನೇ ನೀಡಿಲ್ಲ. ಮತ್ತೊಂದು ಮಳೆಗಾಲ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕಾವೇರಿ ನದಿಪಾತ್ರದ ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ ಸುತ್ತಮುತ್ತಲ ಭಾಗದ ಮಳೆಹಾನಿ ಸಂತ್ರಸ್ತರು ಈ ಬಾರಿ ಎಲ್ಲಿಗೆ ಹೋಗುತ್ತಾರೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಪ್ರವಾಹ ಎದುರಾದಾಗ ಮತ್ತೆ ಇವರುಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಬೇಕಾದ ಅನಿವಾರ್ಯತೆ ಇದೆ ಎಂದು ವೀಣಾಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದರು.
::: ಬಿಜೆಪಿ ಸರ್ಕಾರದಿಂದ ಲಾಭವಾಗಿಲ್ಲ :::
ಕಳೆದ ಆರು ತಿಂಗಳಿನಿಂದ ಜಿಲ್ಲೆಯ ಜನಸಮಾನ್ಯರಿಗೆ ವಿಧವಾ ವೇತನ, ವಿಕಲಚೇತನ ವೇತನ, ವೃದ್ಧಾಪ್ಯ ವೇತನ ಪಾವತಿಯಾಗಿಲ್ಲ. ಇದಕ್ಕೆ ಸರ್ಕಾರದ ವೈಫಲ್ಯ ಅಥವಾ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ ಎನ್ನುವ ಸಂಶಯಗಳು ಹುಟ್ಟಿಕೊಂಡಿದೆ. ಹಣ ನೀಡದೆ ಸತಾಯಿಸುತ್ತಿರುವ ಸರ್ಕಾರದ ನಿರ್ಲಕ್ಷ್ಯದಿಂದ ಬಡವರು ಕಚೇರಿಯಿಂದ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಶಾಸಕರು, ಸಂಸದರು, ಜಿ.ಪಂ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಬಿಜೆಪಿಯವರೇ ಆಗಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೆ ಕೊಡಗು ಜಿಲ್ಲೆಯ ಜನರಿಗೆ, ರೈತರಿಗೆ, ಬೆಳೆಗಾರರಿಗೆ ಯಾವುದೇ ಲಾಭವಾಗಿಲ್ಲ.
ಜಿಲ್ಲೆಗೆ ಆಗಮಿಸುವ ಹೊರ ಜಿಲ್ಲೆಯ ಉಸ್ತುವಾರಿ ಸಚಿವರು ಅಥವಾ ಕೃಷಿ ಸಚಿವರು ಜಿಲ್ಲೆಯಲ್ಲಿ ಪಾಳುಬಿದ್ದಿರುವ ಗದ್ದೆ, ತೋಟಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಇಲ್ಲಿನ ರೈತರು ಹಾಗೂ ಬೆಳೆಗಾರರು ಪ್ರಾಕೃತಿಕ ವಿಕೋಪ, ವನ್ಯಜೀವಿಗಳ ದಾಳಿ, ದುಬಾರಿ ನಿರ್ವಹಣಾ ವೆಚ್ಚದಿಂದ ಕಂಗೆಟ್ಟಿರುವ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅತಿಯಾದ ಮಳೆಯಿಂದ ಪ್ರವಾಹ ಏರ್ಪಟ್ಟು, ಗದ್ದೆ ತೋಟಗಳು ಕೊಚ್ಚಿ ಹೋಗಿರುವುದರಲ್ಲದೆ ಮಣ್ಣು ಮತ್ತು ಮರಳು ಬಂದು ನಿಂತ್ತಿದೆ. ಈ ರೀತಿಯಾದ ನಷ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಪರಿಹಾರವನ್ನು ಇಲ್ಲಿಯವರೆಗೆ ಘೋಷಿಸದ ಸರ್ಕಾರವೇ ಗದ್ದೆ ಮತ್ತು ತೋಟಗಳು ಪಾಳು ಬೀಳಲು ಕಾರಣವಾಗಿದೆ ಎಂದು ವೀಣಾಅಚ್ಚಯ್ಯ ಟೀಕಿಸಿದರು.
ಇತ್ತೀಚಿನ ವರ್ಷಗಳಲ್ಲಿ ನಿತ್ಯ ವನ್ಯಜೀವಿಗಳು ದಾಳಿಮಾಡುತ್ತಿವೆ. ಕಾಡಾನೆ ದಾಳಿಯಿಂದ ಗದ್ದೆ ತೋಟಗಳು ನಾಶವಾಗುತ್ತಿದ್ದರೆ, ಹುಲಿ, ಚಿರತೆಗಳ ದಾಳಿಗೆ ಹಸುಗಳು ಬಲಿಯಾಗುತ್ತಿವೆ. ಇಷ್ಟೆಲ್ಲಾ ಸಂಕಷ್ಟಗಳು ಇದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡಗಿನ ಬಗ್ಗೆ ಕುರುಡಾಗಿವೆ ಎಂದು ಆರೋಪಿಸಿದರು.
ಹೆಕ್ಟೆರ್‍ಗೆ ತಲಾ 5 ಸಾವಿರ ರೂ. ಗಳಂತೆ ಪರಿಹಾರ ನೀಡುವುದು ಅವೈಜ್ಞಾನಿಕ ಕ್ರಮವಾಗಿದ್ದು, ಇದು ಅತ್ಯಲ್ಪ ಮೊತ್ತದ ಪರಿಹಾರವಾಗಿದೆ. ಬೆಳೆದ ಬೆಲೆಗೆ ಸೂಕ್ತ ಬೆಲೆಯೂ ಸಿಗದೇ ಮುಂದಿನ ಜೀವನ ಹೇಗೆ ಎನ್ನುವ ಆತಂಕದಲ್ಲಿ ಕೊಡಗಿನ ಬೆಳೆಗಾರರೂ ಹಾಗೂ ರೈತರು ಇದ್ದಾರೆ. ಇದೇ ಪರಿಸ್ಥಿತಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಎದುರಾಗಿದ್ದರೆ ಜನ ಒಗ್ಗಟ್ಟಾಗಿ ರಸ್ತೆಗಿಳಿದು ಹೋರಾಟ ನಡೆಸಿ ತಮಗೆ ಬೇಕಾದ ಪರಿಹಾರ ಪಡೆದುಕೊಳ್ಳುತ್ತಿದ್ದರು.
ಆದರೆ ಕೊಡಗಿನ ಜನ ಸ್ವಾಭಿಮಾನಿಗಳಾಗಿದ್ದು, ಅತ್ಯಂತ ಸಹನೆಯಿಂದ ಕಾಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಮನೋಭಾವ ಹೀಗೆ ಮುಂದುವರೆದರೆ ಮುಂದೊಂದು ದಿನ ಕೊಡಗಿನ ಜನರ ಬೆಂಬಲದೊಂದಿಗೆ ಉಗ್ರ ರೀತಿಯ ಹೋರಾಟವನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳುವುದಾಗಿ ವೀಣಾಅಚ್ಚಯ್ಯ ಎಚ್ಚರಿಕೆ ನೀಡಿದರು.
ಮಳೆಗಾಲಕ್ಕೂ ಮೊದಲು ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣವನ್ನು ಪೂರ್ಣಗೊಳಿಸಬೇಕು, ನಗರದ ಸ್ಟೋನ್ ಹಿಲ್ ಬಳಿ ಅವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಸುತ್ತಮುತ್ತಲ ಬಡಾವಣೆಗಳ ಜನರು ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ತಕ್ಷಣ ವೈಜ್ಞಾನಿಕ ರೂಪದಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಸುವರ್ಣ ಕನ್ನಡ ಸಮುಚ್ಚಯ ಭವನ, ಕೊಡವ ಹೆರಿಟೇಜ್ ಸೆಂಟರ್ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಇವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ವೀಣಾಅಚ್ಚಯ್ಯ ಇದೇ ಸಂದರ್ಭ ಒತ್ತಾಯಿಸಿದರು.
::: ಪ್ರವಾಸೋದ್ಯಮ ರಿಯಾಯಿತಿ :::
ಕೊಡಗಿನಲ್ಲಿ ಪ್ರವಾಸೋದ್ಯಮವನ್ನೇ ನಂಬಿಕೊಂಡು ಬದುಕು ಸಾಗಿಸುವ ಅನೇಕ ಮಂದಿ ಇದ್ದಾರೆ. ಇವರುಗಳೆಲ್ಲಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡವರಿಗೆ ತೆರಿಗೆ ವಿನಾಯಿತಿ ನೀಡಬೇಕು ಮತ್ತು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದರು.
ಲಾಕ್ ಡೌನ್ ನಿಂದ ಆರ್ಥಿಕ ಹಿನ್ನಡೆ ಉಂಟಾಗಿ ಜನರು ಹಣವಿಲ್ಲದೆ ಪರದಾಡುತ್ತಿರುವಾಗಲೇ ವಿವಿಧ ಕ್ಷೇತ್ರಗಳಲ್ಲಿ ತೆರಿಗೆ ಹೆಚ್ಚಳ ಮಾಡುತ್ತಿರುವ ಸರ್ಕಾರದ ಕ್ರಮ ಖಂಡನೀಯ. ಮಡಿಕೇರಿ ನಗರಸಭೆಯಲ್ಲೂ ತೆರಿಗೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಮಾಡಲಾಗಿದೆ. ಮದ್ಯದ ಮೇಲಿನ ಸುಂಕವನ್ನು ಕೂಡ ದಿಢೀರ್ ಆಗಿ ಹೆಚ್ಚಿಸುವ ಮೂಲಕ ಸರ್ಕಾರ ಜನರ ಮೇಲೆ ಹೊರೆ ಹಾಕಿದೆ ಎಂದು ವೀಣಾಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದರು.
::: ಸರ್ಕಾರ ಕಾಫಿ ಖರೀದಿಸಲಿ :::
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಕಡಿಮೆಯಾಗಿದೆ, ಕೊಡಗಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರವೇ ಚೀಲಕ್ಕೆ ರೂ.4 ಸಾವಿರದಂತೆ ನೀಡಿ ಕಾಫಿಯನ್ನು ಖರೀದಿಸಲಿ ಎಂದು ವೀಣಾಅಚ್ಚಯ್ಯ ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಜನರೊಂದಿಗೆ ಚರ್ಚಿಸುತ್ತಿಲ್ಲವೆಂದು ಟೀಕಿಸಿದ ಅವರು, ಖುದ್ದು ಮುಖ್ಯಮಂತ್ರಿಗಳೇ ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಗೆ ಬಿಡುಗಡೆಯಾದ ಅನುದಾನ ಖರ್ಚಾಗದೆ ಸರ್ಕಾರಕ್ಕೆ ವಾಪಾಸ್ಸಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರಪೇಟೆ ತಾಲ್ಲೂಕಿನಲ್ಲೇ ಸುಮಾರು 80 ಲಕ್ಷ ರೂ.ಗಳಷ್ಟು ಹಣ ಸರ್ಕಾರಕ್ಕೆ ಮರಳಿದೆ. ಸಕಾಲದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸದೆ ಇರುವುದೇ ಹಣ ಮರಳಲು ಕಾರಣವೆಂದು ಟೀಕಿಸಿದರು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕೊಡಗಿನ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದು ರೈತರನ್ನು ಗೊಂದಲದಲ್ಲಿ ಸಿಲುಕಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಧರ್ಮಜ ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಶೂನ್ಯ ಬಡ್ಡಿ ದರದಲ್ಲಿ ನೀಡಿದ ಸಾಲಕ್ಕೆ ಮರು ಪಾವತಿ ಸಂದರ್ಭ ಶೇ 7 ರಷ್ಟು ಬಡ್ಡಿ ವಿಧಿಸುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾಲ ಮರು ಪಾವತಿಸಲು ರೈತರಿಗೆ ಹಾಗೂ ಬೆಳೆಗಾರರಿಗೆ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ನವೀನ್ ಹಾಗೂ ಜಿಲ್ಲಾ ಸದಸ್ಯ ಎ.ಜೆ.ಬಾಬು ಉಪಸ್ಥಿತರಿದ್ದರು.