ಮಾಜಿ ಸಿಎಂಗೆ ಆಹ್ವಾನ ನೀಡದಿದಲ್ಲಿ ಪ್ರತಿಭಟನೆ : ಜೆಡಿಎಸ್ ಎಚ್ಚರಿಕೆ

15/05/2020

ಮಡಿಕೇರಿ ಮೇ 15 : ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನೂತನ ಮನೆಗಳನ್ನು ನಿರ್ಮಿಸಿಕೊಡುವಲ್ಲಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು, ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆಂದು ಒತ್ತಾಯಿಸಿರುವ ಜಾತ್ಯಾತೀತ ಜನತಾದಳದ ಜಿಲ್ಲಾ ಘಟಕ, ತಪ್ಪಿದಲ್ಲಿ ಪಕ್ಷದ ವತಿಯಿಂದ ಕಾರ್ಯಕ್ರಮ ನಡೆಯುವ ಸಂದರ್ಭ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, 2018 ರಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೂತನ ಮನೆಗಳು ದೊರೆಯುವಂತೆ ಮಾಡಿದ್ದಾರೆ. ಏಳು ಬಾರಿ ಕೊಡಗಿಗೆ ಆಗಮಿಸಿ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅಲ್ಲದೆ, ಎಲ್ಲಾ ಸಂತ್ರಸ್ತರಿಗೆ ಪರಿಹಾರ ನೀಡುವುದರ ಜೊತೆಗೆ 840 ಮನೆಗಳ ನಿರ್ಮಾಣಕ್ಕೂ ಕಾರಣರಾಗಿದ್ದಾರೆ. ಆದರೆ, ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ಇದುವರೆಗೆ ಒಂದು ಮನೆಯನ್ನೂ ನಿರ್ಮಿಸಲು ಸಾಧ್ಯವಾಗಿಲ್ಲವೆಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೆ.ನಿಡುಗಣೆ ಗ್ರಾಮದಲ್ಲಿ 35 ಮನೆಗಳನ್ನು ಸಂತ್ರಸ್ತರಿಗೆ ವಿತರಿಸಿದೆ. ಆದರೆ, ಸೌಜನ್ಯಕ್ಕೆ ಕೂಡ ಆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ. ಈಗಲಾದರು ಜಿಲ್ಲೆಯ ಜನಪ್ರತಿಧಿಗಳು ಹಾಗೂ ಜಿಲ್ಲಾಡಳಿತ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಹಾಗೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ್ದ ಸಾ.ರ.ಮಹೇಶ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆಂದು ಒತ್ತಾಯಿಸಿದರು.
ಪ್ರಸಕ್ತ ರಾಜ್ಯದ ವಸತಿ ಸಚಿವರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ, ಅಂದು ಕುಮಾರಸ್ವಾಮಿ ಅವರು ಘೋಷಿಸಿದ್ದ 840 ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ, ನಿರ್ಮಾಣಗೊಂಡ ಮನೆಗಳು ಕೂಡ ಕಳಪೆ ಕಾಮಗಾರಿಯಿಂದ ಕೂಡಿರುವುದಾಗಿ ಆರೋಪಗಳು ಕೇಳಿಬಂದಿವೆ ಎಂದು ಗಣೇಶ್ ದೂರಿದರು.
2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಬಳಿಕ ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರ, ಮನೆಗಳನ್ನು ಕಳೆದುಕೊಂಡವರಿಗೆ 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ, ಮನೆಗಳ ನಿರ್ಮಾಣವಾಗುವವರೆಗೆ ಹಿಂದಿನ ಸರ್ಕಾರ ನೀಡುತ್ತಿದ್ದ 10 ಸಾವಿರ ರೂ. ಬಾಡಿಗೆ ಹಣದ ಬದಲಾಗಿ 5 ಸಾವಿರ ರೂ.ಗಳನ್ನು ನಿಡುವುದಾಗಿ ಘೋಷಿಸಿತ್ತು. ಆದರೆ, ಇದನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಸಂಪೂರ್ಣವಾಗಿ ಎಡವಿದೆಯೆಂದು ಟೀಕಿಸಿದರು.
::: ನಗರಸಭೆಯ ನಿರ್ಲಕ್ಷ್ಯ :::
ಮಡಿಕೇರಿ ನಗರವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ಅದನ್ನು ಪರಿಹರಿಸುವಲ್ಲಿ ಮಡಿಕೆÉೀರಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಗಣೇಶ್ ಇದೇ ಸಂದರ್ಭ ಆರೋಪಿಸಿದರು.
ಈಗಾಗಲೆ ಮಳೆ ಆರಂಭವಾಗಿದ್ದು, ನಗರದ ಚರಂಡಿ ಹಾಗೂ ತೋಡುಗಳನ್ನು ದುರಸ್ತಿ ಪಡಿಸಿ, ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಿಲ್ಲ. ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವೂ ಸಮರ್ಪಕವಾಗಿ ನಡೆದಿಲ್ಲ. ಮಳೆಗಾಲ ಆರಂಭವಾಗುವುದಕ್ಕೂ ಮುನ್ನ ಈ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಒತ್ತಾಯಸಿದÀರು
::: ಎಚ್ಚರಿಕೆ ಅಗತ್ಯ :::
ಕೊರೊನಾ ಲಾಕ್‍ಡೌನ್‍ನ ಮೂರನೇ ಹಂತ ಮುಕ್ತಾಯವಾಗಿ ಇದೇ ಮೇ17 ರ ಬಳಿಕ ನಿರ್ಬಂಧಗಳು ಸಡಿಲಗೊಲ್ಳುವ ಸಾಧ್ಯತೆ ಇದೆ. ಈ ಹಂತದಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಸಾಕಷ್ಟು ಮಂದಿ ಜಿಲ್ಲೆಗೆ ಆಗಮಿಸುವ ಅಪಾಯವಿದೆ. ಈ ಹಂತದಲ್ಲಿ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಅತ್ಯಂತ ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಕಂಡ ಕಂಡಲ್ಲಿ ಉಗುಳುವುದು, ಅನಗತ್ಯವಾಗಿ ಓಡಾಡುವುದನ್ನು ಮಾಡದೆ ಹಸಿರ ವಲಯದಲ್ಲಿರುವ ಕೊಡಗನ್ನು ಜೋಪಾನವಾಗಿ ಕಾಯ್ದುಕೊಳ್ಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಅಲ್ಪ¸ಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರು, ಶಾಸಕರುಗಳು ಬಿಜೆಪಿಯವರೇ ಆಗಿದ್ದರೂ ಮತದಾರರ ನಿರೀಕ್ಷೆಗೆ ತಕ್ಕಂತೆ ಜಿಲ್ಲೆಯಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿಲ್ಲವೆಂದು ಆರೋಪಿಸಿದರು. ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಪ್ಯಾಕೇಜ್‍ಗಳನ್ನು ಘೋಷಿಸಿದ್ದರು ರೈತರ ಸಂಕಷ್ಟಗಳಿಗೆ ಯಾವುದೇ ಸ್ಪಂದನ ದೊರಕಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡುವ ಮೂಲಕ ನೆರವಿಗೆ ಬಂದಿದ್ದರು ಎಂದರು. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರಿಗಾಗಿ ಯಾವುದೇ ಯೋಜನೆಗಳನ್ನು ಪ್ರಕಟಿಸಿಲ್ಲ. ರೈತನ ಕನಿಷ್ಠ 1 ಲಕ್ಷ ರೂ.ಗಳ ಸಾಲವನ್ನಾದರು ಈ ಸರ್ಕಾರ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸುನಿಲ್ ಹಾಗೂ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಾಶಿರ್ ಉಪಸ್ಥಿರಿದ್ದರು.